Kundapra.com ಕುಂದಾಪ್ರ ಡಾಟ್ ಕಾಂ

ಗೋಳಿಹೊಳೆ: ರೈತರಿಗೆ ಜೇನುಕೃಷಿ ತರಬೇತಿ ಕಾರ್ಯಕ್ರಮ

ಬೈಂದೂರು: ಜೇನು ಸಾಕಾಣಿಕೆ ಕೃಷಿಯ ಅವಿಭಾಜ್ಯ ಅಂಗ. ದೈನಿಂದಿನ ಬಿಡುವಿನ ಸಮಯದಲ್ಲಿ ಜೇನು ಕೃಷಿ ಮಾಡಿದರೆ ಕುಟುಂಬದ ಆರ್ಥಿಕ ವ್ಯವಸ್ಥೆಯೂ ಕೂಡಾ ಹೆಚ್ಚುತ್ತದೆ. ಅಲ್ಲದೇ ಮಹಿಳೆಯರೂ ಕೂಡಾ ಇದರಲ್ಲಿ ತೊಡಗಿಸಿಕೊಳ್ಳಬಹುದು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಪಿ. ಚಿದಂಬರ್ ಹೇಳಿದರು.

ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಶ್ರೀ ಮಹಿಷಾಸುರ ಮರ್ಧಿನಿ ಸಭಾಭವನದಲ್ಲಿ ತಾಲೂಕು ಪಂಚಾಯತ್ ಕುಂದಾಪುರ, ತೋಟಗಾರಿಕೆ ಇಲಾಖೆ ಮತ್ತು ರಾಜ್ಯ ವಲಯ ಯೋಜನೆಯ ಜಂಟಿ ಆಶ್ರಯದಲ್ಲಿ ನಡೆದ ರೈತರಿಗೆ ಜೇನುಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೇನುಹುಳುಗಳು ಆಹಾರಕ್ಕಾಗಿ (ಮಕರಂದ) ಹೂವುಗಳನ್ನು ಅರಸುತ್ತಾ ಸುಮಾರು 3-4ಕಿ.ಮಿ ವರೆಗೆ ಸಾಗುತ್ತದೆ. ಪ್ರತಿದಿನ ಬೆಳಗ್ಗೆ 6ರ ಸಮಯದಲ್ಲಿ ಕೆಲಸ ಪ್ರಾರಂಭಿಸುವ ಇವುಗಳಿಗೆ ವಿಶ್ರಾಂತಿ ಎಂಬುದಿಲ್ಲ. ಪರಾಗಸ್ಪರ್ಷವನ್ನು ಜೇನುಹುಳುಗಳಂತೆ ಇತರೇ ಹುಳುಗಳಿಂದ ಸಾಧ್ಯವಾಗದು. ಪರಾಗ ಸ್ಪರ್ಷವಾಗದ ಹೂವುಗಳು ಬಿದ್ದುಹೋಗುತ್ತವೆ. ಇದು ಅಧ್ಬುತ ಶಕ್ತಿ, ಶಿಸ್ತು ಮತ್ತು ಸಮಯಪಾಲನೆಯ ಗುಣಗಳನ್ನು ಅಳವಡಿಸಿಕೊಂಡಿದೆ. ತನ್ನ ಕಾಯಕದ ಹೊರತಾಗಿ ಬೇರೆನೂ ಯೋಚಿಸದೆ ಕೆಲಸ ಪರಿಪೂರ್ಣಮಾಡಿ ಮುಗಿಸುವ ಹಾಗೂ ಮನುಷ್ಯರಿಗೂ ಅನುಕರಣೀಯವಾದ ಶ್ರೇಷ್ಠಹುಳು ಇದಾಗಿದೆ. ಇಂದಿನ ದಿನಗಳಲ್ಲಿ ಕಾಡು ಕಡಿಮೆಯಾಗುತ್ತಿದೆ. ಜೇನುನೊಣಗಳಗೆ ಕಾಡಿನಲ್ಲಿ ಮೊದಲು ಸಿಗುತ್ತಿರುವ ವಿವಿಧ ಹೂವಿನ ಸಮಸ್ಯೆಯಾಗಿರುವುದು ಕಂಡುಬರುತ್ತಿರುವ ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ರೈತರಿಗೆ ತೋಟಗಾರಿಕಾ ಇಲಾಖೆಯ ಮೂಲಕ ಶೇ.೫೦ರಲ್ಲಿ ಜೇನುಪೆಟ್ಟಿಗೆ ಜೊತೆಗೆ ಹುಳ ಹಿಡಿಯುವ, ಸಾಕುವ, ಜೇನು ತೆಗೆಯುವ ಕುರಿತು ಮಾಹಿತಿ ಮತ್ತು ಜೇನು ಸಾಕಾಣಿಕಾ ತರಬೇತಿ ನೀಡಲಾಗುತ್ತಿದೆ ಎಂದರು.

ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಹಿರಿಯ ಕೃಷಿಕ ಬಾಬು ಕೊಠಾರಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಜೇನುಕೃಷಿ ಪ್ರದರ್ಶಕ ಲಕ್ಷಣ ನಾಯಕ್, ಗೋಪಾಲ್ ಕೊಕ್ಕರ್ಣೆ ರೈತರಿಗೆ ಮಾರ್ಗದರ್ಶನ ನೀಡಿದರು. ತೋಟಗಾರಿಕಾ ಸಹಾಯಕ ಅಧಿಕಾರಿ ರೇಷ್ಮಾ ವಂದಿಸಿದರು.

Exit mobile version