Kundapra.com ಕುಂದಾಪ್ರ ಡಾಟ್ ಕಾಂ

ಭಾರತೀಯರದ್ದು ಸಭ್ಯ ಸಂಸ್ಕೃತಿ: ಸುರಭಿ ಜೈಸಿರಿಯಲ್ಲಿ ಡಾ. ಸಯ್ಯದ್ ಜಮಿರುಲ್ಲಾ ಷರೀಫ್

ಬೈಂದೂರು: ಕೇವಲ ಬಾಹ್ಯ ಮೆರಗನ್ನು ನೀಡುವ, ಮಾನಸಿಕ ಸಂತೋಷವನ್ನು ನೀಡದ ಸಂಸ್ಕೃತಿ ಪಾಶ್ಚಾತ್ಯ ದೇಶಗಳಲ್ಲಿ ಬೆಳೆದು ಬಂದಿದೆ. ಭಾರತೀಯ ಸಂಸ್ಕೃತಿಯಲ್ಲಿನ ಸಭ್ಯತೆ, ಮನಸ್ಸನ್ನು ಸಂಸ್ಕರಿಸುವ ಚಿಕಿತ್ಸಕ ಗುಣವನ್ನು ಅಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಸಯ್ಯದ್ ಜಮಿರುಲ್ಲಾ ಷರೀಫ್ ಹೇಳಿದರು

ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಇದರ 16ನೇ ವರ್ಷದ ಸಂಭ್ರಮ ’ಸುರಭಿ ಜೈಸಿರಿ’ಯಲ್ಲಿ ಅವರು ಸಮಾರೋಪ ನುಡಿಗಳನ್ನಾಡಿ ಮನಸ್ಸನ್ನು ತಿದ್ದುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯವ ಸಂಸ್ಕೃತಿಗೆ ಹತ್ತಾರು ಮುಖಗಳಿವೆ. ಅದು ಕಲೆ, ಸಾಹಿತ್ಯ, ಸಂಗೀತ, ನೃತ್ಯದ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಈ ಒಂದಾದರೂ ಪ್ರಕಾರದಲ್ಲಿ ತೊಡಗಿಸಿಕೊಂಡು ನನ್ನನ್ನು ನಾವು ಸಂಸ್ಕರಿಸಿಕೊಳ್ಳುವುದರೊಂದಿಗೆ ಸಂಸ್ಕೃತಿಯ ಉಳಿವಿಗೂ ಕಾರಣರಾಗಬೇಕಿದೆ ಎಂದರು.

ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಗಣೇಶ್ ಕೊರಗ, ಸುರಭಿಯ ನಿರ್ದೇಶಕ ಸುಧಾಕರ ಪಿ., ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು. ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ ತಾರಾನಾಥ ಮೇಸ್ತ ಶಿರೂರು ಅವರನ್ನು ಸನ್ಮಾನಿಸಲಾಯಿತು. sನೃತ್ಯಗುರು ವಿದ್ವಾನ್ ಚಂದ್ರಶೇಖರ ನಾವಡ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸುರಭಿ ನಿರ್ದೇಶಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತಗಳನ್ನಾಡಿದರು. ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ ಕೊರಗ ವಂದಿಸಿದರು. ಸರಸ್ವತಿ ಹುದಾರ್ ನಿರೂಪಿಸಿದರು.

Exit mobile version