ಗಂಗೊಳ್ಳಿ: ನಮ್ಮ ಜೀವನಾವಧಿಯಲ್ಲಿ ದೇವರಿಗೆ ಹತ್ತಿರವಾದ ಮಾಡಿದ ಕೆಲಸ ಕಾರ್ಯಗಳು ಶಾಶ್ವತವಾಗುತ್ತದೆ. ಬಡತನ, ಮೂಡನಂಬಿಕೆ, ಅಜ್ಞಾನ ದೂರವಾಗಬೇಕಾದರೆ ವಿದ್ಯಾಭ್ಯಾಸ ಅತಿ ಮುಖ್ಯ. ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಭಕ್ತಿಯಿಂದ ಪ್ರೀತಿಯಿಂದ ಪ್ರಾರ್ಥನೆ ಮಾಡುವ ಪ್ರಾರ್ಥನಾ ಮಂದಿರಗಳ ಬಗ್ಗೆ ಹೆಚ್ಚಿನ ಕಾಳಜಿ ಆಸಕ್ತಿ ವಹಿಸಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಜರಗಿದ ಗಂಗೊಳ್ಳಿಯ ಇಮಾಕ್ಯುಲೇಟ್ ಕನ್‌ಸೆಪ್ಸನ್ ಚರ್ಚಿನ ನವೀಕರಣ ಹಾಗೂ ಪುನರ್ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸುಮಾರು 385 ವರ್ಷಗಳ ಇತಿಹಾಸ ಹೊಂದಿರುವ ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಇತಿಹಾಸ ಪವಿತ್ರವಾದ ಗಂಗೊಳ್ಳಿಯ ಇಮಾಕ್ಯುಲೇಟ್ ಕನ್‌ಸೆಪ್ಸನ್ ಚರ್ಚಿನ ನವೀಕರಣ ಹಾಗೂ ಪುನರ್ ನಿರ್ಮಾಣ ಕಾರ್ಯದಲ್ಲಿ ರಾಜ್ಯ ಸರಕಾರ ಸಹಭಾಗಿತ್ವ ನೀಡಲಿದ್ದು, ಸರಕಾರದಿಂದ ದೊರೆಯುವ ಅನುದಾನವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಪುರಾತನ ಪವಿತ್ರವಾದ ಪ್ರಾರ್ಥನಾ ಮಂದಿರಗಳ ನವೀಕರಣ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರದ ಕೈಜೋಡಿಸಲಿದೆ ಎಂದು ಅವರು ಹೇಳಿದರು.
ಗಂಗೊಳ್ಳಿಯ ಇಮಾಕ್ಯುಲೇಟ್ ಕನ್‌ಸೆಪ್ಸನ್ ಚರ್ಚಿನ ನವೀಕರಣ ಹಾಗೂ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ರೆ.ಫಾ. ಡಾ.ಜೆರಾಲ್ಡ್ ಐಸಾಕ್ ಲೋಬೋ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ, ಕುಂದಾಪುರ ವಲಯಾಧ್ಯಕ್ಷ ರೆ.ಫಾ. ಅನಿಲ್ ಡಿಸೋಜ, ಉದ್ಯಮಿ ಎಚ್.ಗಣೇಶ ಕಾಮತ್, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಕಾರ್ಕಳ ಅತ್ತೂರು ಚರ್ಚಿನ ಧರ್ಮಗುರು ರೆ.ಫಾ. ಅಲ್ಫೋನ್ಸ್ ಡಿಲೀಮಾ, ಸಿಸ್ಟರ್ ಜೂಲಿಯಾನಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟೋಲಿನೊ, ಚರ್ಚಿನ ಪಾಲನಾ ಮಂಡಳಿ ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು. ಗಂಗೊಳ್ಳಿ ಚರ್ಚಿನ ಧರ್ಮಗುರು ರೆ.ಫಾ. ಅಲ್ಬರ್ಟ್ ಕ್ರಾಸ್ತಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲೆಟ್ ಲೋಬೋ ಮತ್ತು ಒವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ ವಂದಿಸಿದರು.