Kundapra.com ಕುಂದಾಪ್ರ ಡಾಟ್ ಕಾಂ

ಹಕ್ಲಾಡಿ: ಸಮಾಜ ಬದಲಾಗದೇ ಭ್ರಷ್ಟಾಚಾರ ನಿಲ್ಲದು – ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

ಕುಂದಾಪುರ: ಗಳಿಸಿದಷ್ಟು ಬೇಕು ಎಂಬ ದುರಾಸೆಯಿಂದ ಸಮಾಜದಲ್ಲಿ ಮಾನವೀಯತೆ ಮರೆತ ಭ್ರಷ್ಟರು ಹುಟ್ಟಿಕೊಳ್ಳುತ್ತಿದ್ದಾರೆ. ಭ್ರಷ್ಟರನ್ನು ಜನರು ಪೋಷಿಸುತ್ತಿದ್ದರೇ ಕಾರ್ಯಾಂಗ ಮತ್ತು ಶಾಸಕಾಂಗದ ಅದರ ಲಾಭ ಪಡೆಯುತ್ತಿದೆ. ಬದುಕಿನಲ್ಲಿ ತೃಪ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರದಂತಹ ಪಿಡುಗನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಜಸ್ಟಿಸ್ ಸಂತೋಷ್ ಹೆಗ್ಡೆ ಹೇಳಿದರು.

ಅವರು ಹಕ್ಲಾಡಿ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು.  ನಮ್ಮಿಂದ ಚುನಾಯಿಸಲ್ಪಟ್ಟ ವ್ಯಕ್ತಿಗಳು ತಾವು ಜನಸೇವಕರು ಎಂಬುದನ್ನೇ ಮರೆತು ನಮ್ಮನ್ನು ಕೇಳಲು ನಿವ್ಯಾರ್ರಿ ಎಂದು ಪ್ರಶ್ನಿಸುತ್ತಾರೆ. ಓಟು ಕೇಳಲು ಮನೆ ಬಾಗಿಲಿಗೆ ಬರುವ ಮಂದಿ ಗೆದ್ದ ಬಳಿಕ ಜನರನ್ನೇ ಮರೆತು ಆರಾಮಾಗಿ ಬದುಕುತ್ತಿದ್ದಾರೆ. ತಿನ್ನಲು ಅನ್ನ ನೀಡುವ ರೈತ ಆತ್ಮಹತ್ಯೆ ಮಾಡಿಕೊಂಡಾಗ ಅವನ ಕುಟುಂಬವನ್ನು ಸಮಾಧಾನಪಡಿಸಲಿಲ್ಲ. ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಜನನಾಯಕರಿಗೆ ಅನ್ನಿಸಲೇ ಇಲ್ಲ. ಆದರೆ ಅದೇ ಸರಕಾರದ ದುಡ್ಡಿನಲ್ಲಿ ಕೋಟಿ ಕೋಟಿ ಖರ್ಚುಮಾಡಿ ಮನೆ ಕಟ್ಟಿಕೊಳ್ಳಲು, ವಿಧಾನಸೌಧದ ಕಟ್ಟಡದ ಗೋಡೆ ಕೆಡವಲು ಮುಂದಾಗುತ್ತಾರೆ ಎಂದು ಛೇಡಿಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ದೇಶದಲ್ಲಾಗುವ ಎಲ್ಲಾ ಹಗರಣದಲ್ಲಿಯೂ ಶಾಸಕಾಂಗ ಹಾಗೂ ಕಾರ್ಯಾಂಗದ್ದು ದೊಡ್ಡ ಪಾಲಿದೆ. ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯುವ ಮಾಧ್ಯಮ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ಕಾಣಿಸಿಕೊಂಡಿದೆ. ಭ್ರಷ್ಟಾಚಾರಿಗಳನ್ನು ಶಿಕ್ಷಿಸುವುದರಿಂದ ಏನು ಬದಲಾಗೊದಿಲ್ಲ. ಸಮಾಜದಲ್ಲಿ ಬದಲಾವಣೆ ಆದಾಗ ಮಾತ್ರ ನಿಯಂತ್ರಣ ಸಾಧ್ಯವಿದೆ ಎಂದ ಅವರು ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ಮರೆಯಾಗುತ್ತಿದೆ. ತಂದೆ-ತಾಯಿಗಳಿಗೆ ಮಕ್ಕಳಿಗೆ ಹೇಳಿಕೊಡಲು ಸಮಯವಿಲ್ಲದ ಸ್ಥಿತಿ ಇದೆ. ಹೀಗಿರುವಾಗ ಇಂದಿನ ಮಕ್ಕಳಿಗೆ ಹಣ ಹಾಗೂ ಉದ್ಯೋಗವನ್ನು ಗಳಿಸುವ ಹೊರತಾದ ಮೌಲ್ಯವನ್ನು ಕಲಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಶಾಲೆಯ ಮುಖ್ಯೋಪಧ್ಯಾಯ ಡಾ. ಕೆ. ಕಿಶೋರಕುಮಾರ್ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version