Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಬಂಟರಯಾನೆ ನಾಡವರ ಸಂಘ: ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ

ಬೈಂದೂರು: ಬೈಂದೂರು ಬಂಟರಯಾನೆ ನಾಡವರ ಸಂಘ ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಸಮಾರಂಭ ಹಾಗೂ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

ಬೈಂದೂರು ಬಂಟರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಐಎಫ್‌ಎಸ್ ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಪಾಲಕರ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದ ನಿವೃತ್ತ ಮುಖ್ಯಶಿಕ್ಷಕ ವಿ. ಭಾಸ್ಕರ್ ಶೆಟ್ಟಿ ನಾವುಂದ ಇವರಿಗೆ ಬೆಲ್ತೂರು ನಾಗಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ಪ್ರೌಢಶಾಲಾ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕಿಶೋರ್ ಕುಮಾರ್ ಶೆಟ್ಟಿ, ಯುವ ಉದ್ಯಮಿ ಬಿ.ಎಸ್.ಸುರೇಶ ಶೆಟ್ಟಿ, ಉತ್ತಮ ಕೃಷಿಕ ಕೆರಾಡಿ ಮೂಡಗಲ್ಲಿನ ಸೂಲಿಯಣ್ಣ ಶೆಟ್ಟಿ ಇವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದೇ ವೇಳೆ ಬೈಂದೂರು ವಲಯದ ಎಲ್ಲಾ ಪ್ರೌಢಶಾಲೆಗಳ 8, 9, 10ನೇ ತರಗತಿಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ದಶಮಿ ಶೆಟ್ಟಿ ಹೇರೂರು ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ಶ್ರೀಧರ ಹೆಗ್ಡೆ, ಸಮಾಜ ಸೇವಾ ಸಮಿತಿ ಅಧ್ಯಕ್ಷ ಅಮರನಾಥ ಶೆಟ್ಟಿ ಬಂಟ ಸಮಾಜದ ಬಡ ಮಹಿಳೆಯರಿಗೆ ಸ್ವ-ಉದ್ಯೋಗ ಮಾಡುವ ನೆಲೆಯಲ್ಲಿ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.

ಧಾರವಾಡದ ಉದ್ಯಮಿ ಯು. ಬಿ. ಶೆಟ್ಟಿ, ಗೌರವಾಧ್ಯಕ್ಷ ಡಾ| ಸುಧಾಕರ ಹೆಗ್ಡೆ, ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ, ಉಪಾಧ್ಯಕ್ಷರಾದ ನೈಲಾಡಿ ಶಿವರಾಮ ಶೆಟ್ಟಿ, ಕೆ.ವಿಠಲ ಶೆಟ್ಟಿ, ಮಂಗಳೂರು ಬಂಟರ ಸಂಘದ ಉಪಾಧ್ಯಕ್ಷ ಸೋಮಶೇಖರ ಶೆಟ್ಟಿ, ತಾಲೂಕು ಬಂಟರ ಯುವ ವೇದಿಕೆ ಅಧ್ಯಕ್ಷ ಹೆಚ್. ಸುಕೇಶ್ ಶೆಟ್ಟಿ, ಕಾಲ್ತೋಡು ಬಂಟರ ಉಪ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಶಿಲ್ಪಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇತನ ಸಮಿತಿ ಸಂಚಾಲಕ ಯು.ಗೋಪಾಲ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಕರುಣಾಕರ ಶೆಟ್ಟಿ ಸ್ವಾಗತಿಸಿ, ಜಗದೀಶ ಶೆಟ್ಟಿ ವಂದಿಸಿದರು. ಯುವ ವೇದಿಕೆ ಸಂಚಾಲಕ ವಸಂತರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version