ಗಂಗೊಳ್ಳಿ: ಸಂಘ ಸಂಸ್ಥೆಗಳು ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತನ್ನಿಂದಾಗುವ ಸಹಾಯ ಸಹಕಾರವನ್ನು ನೀಡಬೇಕು. ಸಂಘ ಸಂಸ್ಥೆಗಳ ಸದಸ್ಯರಲ್ಲಿ ಒಗ್ಗಟ್ಟು ಅತೀ ಮುಖ್ಯವಾಗಿದ್ದು ಎಲ್ಲರೂ ಒಂದಾಗಿ ಒಂದೇ ಮನಸ್ಸಿನಿಂದ ತಮ್ಮ ಚಟುವಟಿಕೆಗಳನ್ನು ನಡೆಸಬೇಕು. ಗ್ರಾಮದ ಹಾಗೂ ಪರಿಸರದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಕಳೆದ ೨೨ ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ, ಧಾರ್ಮಿಕ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಗಂಗೊಳ್ಳಿಯ ಪಂಚಗಂಗಾವಳಿ ಬಳಗದ ಸಾಧನೆ ಶ್ಲಾಘನೀಯ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ಪಂಜುರ್ಲಿ ದೇವಸ್ಥಾನದ ವಠಾರದಲ್ಲಿ ಜರಗಿದ ಗಂಗೊಳ್ಳಿಯ ಪಂಚಗಂಗಾವಳಿ ಬಳಗದ ೨೨ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಕಲಾ ಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ಶಿರೂರಿನ ಉದ್ಯಮಿ ಗೋಪಾಲಕೃಷ್ಣ, ಗಂಗೊಳ್ಳಿ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರದೀಪ ಡಿ.ಕೆ. ಶುಭ ಹಾರೈಸಿದರು. ಇದೇ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಡಾ.ಭಾರತಿ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಜಿ.ಟಿ., ಸಂಘದ ಅಧ್ಯಕ್ಷ ಸಂದೀಪ ಕೆ. ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಜಿ.ಎನ್.ಸತೀಶ ಖಾರ್ವಿ ಸ್ವಾಗತಿಸಿದರು. ಕಾರ್ಯದರ್ಶಿ ಜಿ.ಎನ್.ದಿಲೀಪ್ ಖಾರ್ವಿ ವರದಿ ವಾಚಿಸಿದರು. ಸಜಿತ್ ಬಿ. ಸಂದೇಶ ವಾಚಿಸಿದರು. ಶೋಭಾ ಎಸ್.ಆರ್ಕಾಟಿ ಅಭಿನಂದನಾ ಪತ್ರ ವಾಚಿಸಿದರು. ಜಿ.ಎಂ. ರಾಘವೇಂದ್ರ ಖಾರ್ವಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಚೇತನ್ ಖಾರ್ವಿ ವಂದಿಸಿದರು.