Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಬಸವೇಶ್ವರ ದೇವಸ್ಥಾನದ ನವೀಕೃತ ನೂತನ ಕಟ್ಟಡ ಲೋಕಾರ್ಪಣೆ

ಗಂಗೊಳ್ಳಿ: ಭಕ್ತಿಯಿಂದ ದೇವರ ಪ್ರೀತಿಗಳಿಸಲು ಸಾಧ್ಯವಿದೆ. ಭಕ್ತಿ, ಶ್ರದ್ಧೆ ಹಾಗೂ ಪ್ರಾಮಾಣಿಕತೆಗೆ ದೇವರು ಒಲಿಯುತ್ತಾನೆ. ನಮ್ಮಲ್ಲಿ ಕರುಣೆ, ಮಿತೃತ್ವ ಭಾವನೆ ಇರಬೇಕು. ಯಾರೊಬ್ಬರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಯಿಂದ ನಾವೆಲ್ಲರೂ ಒಂದೇ ಎಂಬ ಭಾವದಿಂದ ನೋಡಬೇಕು. ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿಕೊಂಡು ಸಮಾಜದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದು ತಾಳಗುಪ್ಪ ಕೂಡ್ಲಿ ಬಾರಂಗಿ ಮಹಾಸಂಸ್ಥಾನದ ಶ್ರೀ ಮ| ನಿ| ಪ್ರ. ಸಿದ್ಧವೀರ ಮಹಾಸ್ವಾಮಿಗಳು ಹೇಳಿದರು.

ಅವರು ಸೋಮವಾರ ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ಬಾವಿಕಟ್ಟೆ ಬಳಿಯ ಶ್ರೀ ಬಸವೇಶ್ವರ ದೇವಸ್ಥಾನದ ನವೀಕೃತ ನೂತನ ಕಟ್ಟಡ ಲೋಕಾರ್ಪಣೆ ಮತ್ತು ಶಿವಲಿಂಗ, ನಂದಿ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಸಮಸ್ತ ಜೀವಿಗಳು ಬಯಸುವುದು ಸುಖವನ್ನು. ಸುಖ ದೊರೆಯಬೇಕಾದರೆ ಭಗವಂತನ ಸ್ತುತಿ, ಆರಾಧನೆ, ಉಪಾಸನೆ ಮಾಡಬೇಕು. ಪ್ರತಿನಿತ್ಯ ಮನೆಗಳಲ್ಲಿ ದೇವರ ಪೂಜೆ, ಆರಾಧನೆ ನಿರಂತರವಾಗಿ ನಡೆಯುತ್ತಿರಬೇಕು. ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನಮ್ಮಿಂದಾಗುವ ಸೇವೆ ಸಲ್ಲಿಸಬೇಕು. ಹಿಂದುಳಿದ ಸಮಾಜದವರಲ್ಲಿನ ಒಗ್ಗಟ್ಟು ಇನ್ನಷ್ಟು ಬಲಗೊಂಡು ಎಲ್ಲಾ ರಂಗಗಳಲ್ಲಿ ಕ್ಷೇತ್ರಗಳಲ್ಲಿ ಮುಂದುವರಿಯಬೇಕು ಎಂದರು.

ಬಸ್ರೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ಎಂ.ರಾಮಕೃಷ್ಣ ಪೈ ಮುಳ್ಳಿಕಟ್ಟೆ ಅವರು ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ನಾಗ ಖಾರ್ವಿ, ಜಿಪಂ ಸದಸ್ಯ ಅನಂತ ಮೊವಾಡಿ, ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಪತ್ರಕರ್ತ ಬಿ.ರಾಘವೇಂದ್ರ ಪೈ. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಗಂಗೊಳ್ಳಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ವಾಸುದೇವ ಶೇರುಗಾರ್, ಸಮಾಜಸೇವಕ ಜಿ.ಗಣಪತಿ ಶಿಪಾ ಶುಭ ಹಾರೈಸಿದರು.

ಇದೇ ಸಂದರ್ಭ ನಾಯಕವಾಡಿ ಶ್ರೀ ಸಂಗಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪಾಂಡುರಂಗ ಕೆ. ಅವರಿಗೆ ಪುರೋಹಿತ ರತ್ನಂ ಬಿರುದು ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ಗೆ ವಿಶೇಷ ಗೌರವ ಸಲ್ಲಿಸಲಾಯಿತು. ರುಕ್ಮಿಣಿ ಹುಣ್ಸೆಹಿತ್ಲು, ದೇವಸ್ಥಾನದ ಗೌರವಾಧ್ಯಕ್ಷ ಜಯಪ್ರಕಾಶ ಕೆ. ಮತ್ತು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ಗಂಗೊಳ್ಳಿ ಉಪಸ್ಥಿತರಿದ್ದರು. ಶಶಿದೀಪ ಕೆ. ಸ್ವಾಗತಿಸಿದರು. ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version