Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಪಾಠ ಮಾಡಲು ಉಪನ್ಯಾಸಕರಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆ

ಬೈಂದೂರು: ಅತಿಥಿ ಶಿಕ್ಷಕರ ಪ್ರತಿಭಟನೆಯಿಂದಾಗಿ ಕಳೆದ ಹಲವಾರು ದಿನಗಳಿಂದ ವಿಧ್ಯಾರ್ಥಿಗಳ ಭವಿಷ್ಯದ ವಿರುದ್ದ ಆಟವಾಡುತ್ತಿರುವ ಅತಿಥಿ ಶಿಕ್ಷಕರ ವಿರುದ್ದ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಎದುರುಗಡೆ ವಿದ್ಯಾರ್ಥಿಗಳು ಮೂರನೇ ದಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಇವರ ಆಶ್ರಯದಲ್ಲಿ ಪ್ರತಿಭಟನೆ ನೆಡೆಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೇಂದ್ರೀಯ ಕಾರ್ಯಸಮಿತಿ ಸದಸ್ಯೆ ಚೈತ್ರ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹೆಚ್ಚಾಗಿ ಬಡವರು, ಮಧ್ಯಮ ವರ್ಗದ 900 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ಬೈಂದೂರು ಪ್ರಥಮ ದರ್ಜೆ ಕಾಲೇಜು ಬೇರೆ ಎಲ್ಲಾ ಕಾಲೇಜಿಗಿಂತ ಒಂದು ರೀತಿಯಲ್ಲಿ ವಿಭಿನ್ನವಾಗಿ ಕಾಣುತ್ತಿದೆ. ಸಾಮಾನ್ಯವಾಗಿ ಎಲ್ಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳು ತರಗತಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಈಗ ಉಪನ್ಯಾಸಕರು ವಿಧ್ಯಾರ್ಥಿಗಳ ಕಣ್ಣು ತಪ್ಪಿಸಿಕೊಂಡು ತಿರುಗಾಡುವ ಪರಿಸ್ಥಿತಿ ಬಂದಿದೆ ಎಂದರು.

ಅತಿಥಿ ಉಪನ್ಯಾಸಕರು ಮುಷ್ಕರದಲ್ಲಿ ನಿರತರಾಗಿದ್ದಾರೆ. ಅವರಿಗೆ ಸಿಗಲೇ ಬೇಕಾಂತಹ ನ್ಯಾಯಕ್ಕಾಗಿ ಅವರು ಹೋರಾಟ ಮಾಡಲಿ. ಈ ವಿಚಾರದಲ್ಲಿ ವಿದ್ಯಾಥಿಗಳಾದ ನಾವು ಕೂಡಾ ಬೆಂಬಲ ಸೂಚಿಸುತ್ತೇವೆ. ಅಂತಿಮ ಪರೀಕ್ಷೆಗಳು ಹತ್ತಿರ ಬರುತ್ತಿದೆ. ಇದಕ್ಕೆ ತಯಾರಿ ನಡೆಸಬೇಕಾಗಿದೆ. ಆದರೆ ಯಾವ ಪಾಠವೂ ಸರಿಯಾಗಿ ಬೋಧಿಸಲಿಲ್ಲ. ಮಾಡಬೇಕಾಗಿರುವ ಪಾಠಗಳು ಬಹಳ ಬಾಕಿಯಿದೆ. ಪರಿಸ್ಥಿತಿ ಹೀಗಾದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೇನು ಎಂದು ಪ್ರಶ್ನಿಸಿದ ಅವರು ನಮಗೆ ಉಪನ್ಯಾಸಕರನ್ನು ತಕ್ಷಣ ನೇಮಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ಇವರಿಗೆ ಮನವಿ ಸಲ್ಲಿಸಲಾಯಿತು.

Exit mobile version