Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯಿಂದ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ

ಗಂಗೊಳ್ಳಿ: ಕೋಮುಸೂಕ್ಷ್ಮ ಪ್ರದೇಶ ಎಂದು ಹೆಸರಾಗಿದ್ದ ಗಂಗೊಳ್ಳಿಯಲ್ಲಿಗ ಯಾವುದೇ ಘರ್ಷಣೆಗಳಿಲ್ಲ. ಆದರೆ ಸ್ಟೀಲ್ ಬೋಟ್ ದುರಸ್ತಿ ನೆಪದಲ್ಲಿ ಕಬ್ಬಿಣ ಮತ್ತು ರಾಸಾಯನಿಕ ವಸ್ತುಗಳ ಬಳಕೆಯಿಂದ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ನಮ್ಮ ರಕ್ಷಣೆ ನಮ್ಮ ಕೈಯಲ್ಲಿ ಎನ್ನುವಂತೆಯೇ ಪರಿಸರದ ರಕ್ಷಣೆಯೂ ನಮ್ಮ ಕೈಯಲ್ಲಿಯೇ ಇದೆ ಎಂದು ಸಾಹಿತಿ, ಅಂಕಣಕಾರ ಕೋ.ಶಿ.ಕಾರಂತ ಹೇಳಿದರು.

ಸಂಜೆ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ’ಗಂಗೊಳ್ಳಿ ನಾಗರಿಕರ ಆರೋಗ್ಯ ರಕ್ಷಣೆಗಾಗಿ ಕ್ಯಾಂಡಲ್ ಲೈಟ್ ಪ್ರತಿಭಟನೆ ಎನ್ನುವ ವಿನೂತನ ರೀತಿಯ ಪ್ರತಿಭಟನೆಯಲ್ಲಿ ಮೇಣದ ಬತ್ತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಣ ಸಂಯೋಜಕ ಮತ್ತು ಪರಿಸರವಾದಿ ಉದಯ ಗಾಂವ್ಕರ್ ಮಾತನಾಡಿ, ಪ್ರತಿ ಮನುಷ್ಯನಿಗೂ ಅವನ ಕುಟುಂಬದ ಜೊತೆಗೆ ಮಾತ್ರ ಸಂಬಂಧವಲ್ಲ. ಸುತ್ತಮುತ್ತಲಿನ ಜನರ ಜೊತೆಯೂ ಸಂಬಂಧವಿದೆ. ಅದೇ ರೀತಿ ಸುತ್ತಲಿನ ಮರಗಿಡಗಳು, ಪ್ರಾಣಿ ಜಂತುಗಳು, ಗಾಳಿ ಬೆಳಕುಗಳ ನಡುವೆ ಸಂಬಂಧವೂ ಇದೆ. ಇದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು. ಇಲ್ಲವಾದಲ್ಲಿ ಸಮೂಹ ಪೀಡೆಗೆ ಒಳಗಾಗಬೇಕಾಗುತ್ತದೆ ಎನ್ನುವ ಜ್ಞಾನ ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಗಂಗೊಳ್ಳಿಯಲ್ಲಾಗುವ ಪರಿಸರ ಹಾನಿ ಉದ್ದಿಮೆಗಳನ್ನು ಸಂಘಟನಾತ್ಮಕವಾಗಿ ತಡೆಗಟ್ಟುವ ಬಗ್ಗೆ ಪ್ರತಿಭಟನೆಯಲ್ಲಿ ನಿರ್ಣಯಿಸಲಾಯಿತು. ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಹಾದಿ ಹಿಡಿದಾದರೂ ಆರೋಗ್ಯದ ರಕ್ಷಣೆ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.  ವಕೀಲ ಸೋಮನಾಥ ಬನ್ನಾಡಿ ಸ್ವಾಗತಿಸಿದರು. ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಭಾಸ್ಕರ ಖಾರ್ವಿ ಕಾರ್ಯಕ್ರಮ ಸಂಯೋಜಿಸಿ, ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

Exit mobile version