Kundapra.com ಕುಂದಾಪ್ರ ಡಾಟ್ ಕಾಂ

ಬೇರೆಯವರ ನಿರ್ಧಾರಗಳ ಮೇಲೆ ಬದುಕು ಕಟ್ಟಿಕೊಳ್ಳಬೇಡಿ: ನರೇಂದ್ರ ಎಸ್. ಗಂಗೊಳ್ಳಿ

ಕುಂದಾಪುರ: ಬೇರೆಯವರ ನಿರ್ಧಾರಗಳ ಮೇಲೆ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಹೊರಡಬೇಡಿ. ಎಲ್ಲವನ್ನೂ ಅವಲೋಕಿಸಿಕೊಂಡು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಛಾತಿ ಇದ್ದಾಗ ಮಾತ್ರ ಸುಂದರವಾದ ಬದುಕು ನಮ್ಮದಾಗಲು ಸಾಧ್ಯ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಹೇಳಿದರು.

ಅವರು ಇತ್ತೀಚೆಗೆ ಕುಂದಾಪುರದ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬದುಕು ಮತ್ತು ವಿದ್ಯಾರ್ಥಿ ಎನ್ನುವ ವಿಚಾರದ ಬಗೆಗ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಜಾಲತಾಣಗಳ ಲೈಕು ಕಮೆಂಟುಗಳಿಂದ ವ್ಯಕ್ತಿತ್ವವನ್ನು ನಿರ್ಧರಿಸಬೇಡಿ. ಉಡಾಫೆಯ ಮನೋಭಾವ ನಮ್ಮ ದೌರ್ಬಲ್ಯವೇ ಹೊರತು ಶಕ್ತಿಯಲ್ಲ. ನಮ್ಮ ಸಾಧನೆಗಳಿಂದ ನಾವು ಗುರುತಿಸಿಕೊಳ್ಳುವಲ್ಲಿ ನಮ್ಮ ಶ್ರಮವಿರಬೇಕು. ಸವಾಲುಗಳನ್ನು ಎದುರಿಸಿ ನಿಲ್ಲುವ ಛಲ ನಮ್ಮದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕುಂದಾಪುರದ ಡಿ.ವೈ.ಎಸ್.ಪಿ ಎಮ್ ಮಂಜುನಾಥ ಅವರು ಕಾರ‍್ಯಕ್ರವನ್ನು ಉದ್ಘಾಟಿಸಿದರು.ಕಾಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯತ್ ನ ಕಾರ‍್ಯನಿರ್ವಹಣಾಧಿಕಾರಿ ಎನ್ ನಾರಾಯಣ ಸ್ವಾಮಿ, ಕುಂದಾಪುರ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಚಿತ್ತೂರಿನ ವೈದ್ಯ ಡಾ.ಅತುಲ್ ಕುಮಾರ್ ಶೆಟ್ಟಿ,ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಬಿ.ಎಸ್ ಮಾದರ ಮತ್ತು ವಿದ್ಯಾರ್ಥಿ ನಿಲಯದ ನಾಯಕ ಮಂಜುನಾಥ ಉಪಸ್ಥಿತರಿದ್ದರು. ಶರತ್ ಸ್ವಾಗತಿಸಿದರು. ಅರುಣ್ ಅತಿಥಿಗಳನ್ನು ಪರಿಚಯಿಸಿದರು. ಗಣೇಶ್ ಬಹುಮಾನಿತರ ಪಟ್ಟಿ ವಾಚಿಸಿದರು.ನಯನ್ ನಿರೂಪಿಸಿದರು. ಗುರುರಾಜ್ ಧನ್ಯವಾದ ಅರ್ಪಿಸಿದರು.

Exit mobile version