ಕುಂದಾಪುರ: ರಬ್ಬರ್ ಬೆಲೆ ಇಳಿತ, ರಬ್ಬರ್ ಇಳುವರಿ ಕಡಿತ ಮತ್ತು ಸಾಲಬಾದೆಯಿಂದ ನೊಂದ ರಬ್ಬರ್ ಕೃಷಿಕ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
ಬೈಂದೂರು ವಿಧಾನ ಸಭಾ ಕ್ಷೇತ್ರ ಜಡ್ಕಲ್ ಗ್ರಾಮ, ಬೀಸನಪಾರೆ ರಬ್ಬರ್ ಕೃಷಿಕ ಸಿ.ಸಿ.ಜೋಸೆಫ್ (62) ಆತ್ಮಹತ್ಯೆ ಮಾಡಿಕೊಂಡವರು. ಶುಕ್ರವಾರ ರಾತ್ರಿ ವಿಷ ಸೇವಿಸಿದ ಜೋಸೆಪ್ ಅವರನ್ನು ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದ ತಡರಾತ್ರಿ ಮೃತಪಟ್ಟಿದ್ದಾರೆ.
ಜೋಸೆಫ್ ಪುತ್ರಿ ಮದುವೆಗಾಗಿಯೂ ಸಾಲ ಮಾಡಿಕೊಂಡಿದ್ದ ಅವರ ಮನೆ ಕಟ್ಟಲು ಮುಂದಾಗಿದ್ದರೂ, ಆರ್ಥಿಕ ಅಡಚಣೆಯಿಂದಾಗಿ ಮನೆ ಕಟ್ಟುವ ಕಾರ್ಯ ಅರ್ಧಕ್ಕೆ ನಿಂತಿದೆ. ಈ ಎಲ್ಲ ತಾಪತ್ರಯಗಳ ನಡುವೆ ರಬ್ಬರ್ ಮಾರುಕಟ್ಟೆ ಕುಸಿದಿರುವುದರಿಂದಾಗಿ ಕಂಗಾಲಾಗಿದ್ದ ಆತ್ಮಹತ್ಯೆಯ ನಿರ್ಧಾರಕ್ಕೆ ಮುಂದಾಗಿದ್ದರು ಎಂದು ಕುಟುಂಬದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೀಸನಪಾರೆಯಲ್ಲಿ ಸಿ.ಸಿ.ಜೋಸೆಫ್ ೧.೩೦ ಎಕ್ರ ರಬ್ಬರ್ ಕೃಷಿ ಮಾಡಿದ್ದು, ಅದಕ್ಕಾಗಿ ಸ್ವಸಹಾಯ ಸಂಘ ಮತ್ತು ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ೧.೩೦ ಲಕ್ಷ ಸಾಲ ಮಾಡಿದ್ದರು. ಬೆಲೆ ಇಳಿತ ಮತ್ತು ಇಳುವರಿ ಕ್ಷೀಣಿಸಿದ್ದರಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ಪತ್ನಿ ಮೋಳಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಗಣ್ಯರ ಭೇಟಿ :
ರೈತನ ಆತ್ಮಹತ್ಯೆ ಸುದ್ದಿ ಕೇಳಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಚಿವ ವಿನಯಕುಮಾರ ಸೊರಕೆ, ವಿಧಾನಪರಿಷತ್ ಸದಸ್ಯರಾದ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಜಯಮಾಲ, ಮಾಜಿ ಶಾಸಕ ಯು.ಆರ್ ಸಭಾಪತಿ, ಕಂದಾಯ ಉಪವಿಭಾಗಾಧಿಕಾರಿ ಎಸ್.ಅಶ್ವಥಿ, ತಹಸೀಲ್ದಾರ್ ಗಾಯತ್ರಿ ನಾಯಕ್ ಹಾಗೂ ಡಿವೈಎಸ್‌ಪಿ ಎಂ.ಮಂಜುನಾಥ ಶೆಟ್ಟಿ ಭೇಟಿ ನೀಡಿದರು.