Kundapra.com ಕುಂದಾಪ್ರ ಡಾಟ್ ಕಾಂ

ನಂಬಿಕೆಯಿಲ್ಲದಿದ್ದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯವಿಲ್ಲ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಬೈಂದೂರು: ಕಲಿಯುಗದಲ್ಲಿ ಗಣಪತಿಯ ಆರಾಧನೆ ಸರ್ವಶ್ರೇಷ್ಠವಾಗಿದೆ. ಅವನನ್ನು ಭಕ್ತಿ ಹಾಗೂ ಶುದ್ಧ ಮನಸ್ಸಿನಿಂದ ಆರಾಧಿಸಿದರೆ ಕಾರ್ಯಸಿದ್ಧಿಯಾಗುತ್ತದೆ. ದೇವರನ್ನು ನಂಬಿ, ಧಾರ್ಮಿಕ ನಂಬಿಕೆಯಿಲ್ಲದಿದ್ದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯವಿಲ್ಲ ಎಂದು ಸಿರಸಿ ಸೋಂದಾ ಸ್ವರ್ಣವಲ್ಲಿ ಮಠದ ಪೀಠಾಧಿಪತಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಬೈಂದೂರು ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಐದು ದಿನಗಳ ಪರ್ಯಂತ ನಡೆಯುತ್ತಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗಕ್ಕೆ ಮಧ್ಯಾಹ್ನ ಪೂರ್ಣಾಹುತಿ ನೀಡಿದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಗಣಪತಿ ದೇವರ ಆಕಾರಕ್ಕೂ ಆಧ್ಯಾತ್ಮಿಕವಾದ ಅರ್ಥವಿದೆ. ಆತನ ದೇಹದ ಅವಯವಗಳು ಒಂದೊಂದು ಸಂದೇಶಗಳನ್ನು ನೀಡುತ್ತದೆ. ವಿಶೇಷ ಯಜ್ಞದಲ್ಲಿ ಅಗ್ನಿಯಲ್ಲಿ ವಿಧಿವತ್ತಾಗಿ, ಶಾಸ್ತ್ರೋಕ್ತವಾಗಿ ನೀಡಿದ ಆಹುತಿ ಸೂರ್ಯನ ಮೂಲಕ ದೇವತೆಗಳಿಗೆ ತಲುಪಿ ಅವರು ಪ್ರಸನ್ನರಾಗಿ ಕಾಲಕಾಲಕ್ಕೆ ಮಳೆ-ಬೆಳೆ ಹಾಗೂ ಅನ್ನ ಸಮೃದ್ದಿಯಾಗುತ್ತದೆ. ವಿಶ್ವವೇ ವಿಘ್ನೇಶ್ವರನನ್ನು ಪೂಜಿಸುತ್ತದೆ. ವಿದೇಶದಲ್ಲಿಯೂ ಕೂಡಾ ಗಣಪತಿಯ ದೇವಾಲಯಗಳ ಪ್ರಾಚೀನ ಕುರುಹು ಪತ್ತೆಯಾಗಿದೆ. ದೇವರು ಧರ್ಮದ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಭಕ್ತಿಮಾರ್ಗದ ಮೂಲಕ ಪರಮಾತ್ಮನನ್ನು ಅತೀ ಸುಲಭವಾಗಿ ಒಲಿಸಿಕೊಂಡು ಸಿದ್ಧಿ ಪಡೆಯಬಹುದು ಎಂದರು.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅಧ್ಯಕ್ಷತೆವಹಿಸಿದ್ದರು. ಉದ್ಯಮಿಗಳಾದ ರಾಹುಲ್‌ದೇವ್ ಅಂಬಾದಾಸ್ ಹೊಳ್ಳ, ಬಿಜೂರು ರಾಮಕೃಷ್ಣ ಶೇರುಗಾರ, ಕೃಷ್ಣ ನಾಯ್ಕ್ ಭಟ್ಕಳ, ಜಯಾನಂದ ಹೋಬಳಿದಾರ್, ಡಾ. ಅಣ್ಣಪ್ಪ ಶೆಟ್ಟಿ, ರವೀಂದ್ರ ವಿ. ಸರಾಫ್, ಬಿ. ಜಗನ್ನಾಥ ಶೆಟ್ಟಿ ಐಎಫ್‌ಎಸ್, ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ದೇವಾಡಿಗ ಉಪಸ್ಥಿತರಿದ್ದರು.

ಶ್ರೀಮಹಾಸತಿ ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಪ್ರಾಸ್ತಾವಿಸಿದರು. ಸೇವಾಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ವಂದಿಸಿದರು. ಸುಧಾಕರ ಪಿ., ಗಣಪತಿ ಹೋಬಳೀದಾರ್ ನಿರೂಪಿಸಿದರು.

Exit mobile version