Kundapra.com ಕುಂದಾಪ್ರ ಡಾಟ್ ಕಾಂ

ಬಿಜೆಪಿಗರಿಗೆ ಸೋಲಿನ ಭಯ. ಹಾಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ: ರಾಜು ಪೂಜಾರಿ

ಬೈಂದೂರು ಬಿಜೆಪಿ ಅಧ್ಯಕ್ಷರ ಹುರುಳಿಲ್ಲದ ಆರೋಪ ನೋವುಂಟುಮಾಡಿದೆ

ಕುಂದಾಪ್ರ ಡಾಟ್ ಕಾಂ ಸುದ್ದಿ

ಬೈಂದೂರು: ಚುನಾವಣೆಯಲ್ಲಿ ಸೋಲಿನ ಸುಳಿವು ದೊರೆತ ಭಾಜಪ ಅಭ್ಯರ್ಥಿಗಳ ಕಡೆಯವರು ಸುಳ್ಳು ಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇಂತಹ ಅಪಪ್ರಚಾರಗಳಿಗೆ ಹೆದರುವುದಿಲ್ಲ. ಬಿಜೆಪಿ ಎಷ್ಟೇ ಪ್ರಯತ್ನ ಪಟ್ಟರೂ ಮತದಾರರ ಮನಸ್ಸನ್ನು ಗೆಲ್ಲಲಾಗಲಿಲ್ಲ. ಹಾಗಾಗಿ ಚುನಾವಣೆ ಘೋಷಣೆ ಯಾದಾಗಿನಿಂದಲೂ ನನ್ನ ವಿರುದ್ದ ಕೆಲವು ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ ಎಂದು ಬೈಂದೂರು ಜಿಲ್ಲಾ ಪಂಚಾಯತ್ ಅಭ್ಯರ್ಥಿ ರಾಜು ಪೂಜಾರಿ ಆರೋಪಿಸಿದರು.

ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ನಿರಂತರ ತೇಜೋವಧೆ ಮಾಡಿ, ಸುಳ್ಳಿನ ಕಂತೆ ಹಣೆದರೆ ಗೆಲುವು ಸಾಧ್ಯ ಎಂದು ಬಿಜೆಪಿ ಪಕ್ಷದವರು ತಿಳಿದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಲು ಸರಿಯಾದ ಮಾರ್ಗಗಳಿವೆ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು , ಜನರಿಗೆ ಸರಕಾರದಿಂದ ದೊರೆತ ಸೌಲಭ್ಯಗಳು, ಶಾಸಕ ಕೆ. ಗೋಪಾಲ ಪೂಜಾರಿ ಯವರ ಸಾಧನೆಗಳು ಗೆಲುವಿಗೆ ಪೂರಕವಾಗಿದೆ. ಅದು ಬಿಟ್ಟು ಅನ್ಯ ಮಾರ್ಗದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಬೇಕಾಗಿಲ್ಲ ತಿರುಗೇಟು ನೀಡಿದ್ದಾರೆ.  ಕುಂದಾಪ್ರ ಡಾಟ್ ಕಾಂ ಸುದ್ದಿ

ನಾನು ಗ್ರಾಮ ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಸದಸ್ಯನಾಗಿ, ತಾಲೂಕು ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಕಳೆದ ೨೫ ವರ್ಷಗಳಿಂದ ರಾಜಕೀಯ, ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದೇನೆ. ಜನಪರ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ನನ್ನ ಗೆಲುವಿಗೆ ಕಾಂಗ್ರೆಸ್ ಪಕ್ಷವಿದೆ, ಮತದಾರರಿದ್ದಾರೆ. ಹಗಲು ರಾತ್ರಿ ದುಡಿಯುವ ಕಾರ್ಯಕರ್ತ ರಿದ್ದಾರೆ. ಜನರ ನಿರಂತರ ಒಡನಾಟವಿದೆ. ಅದು ಬಿಟ್ಟು ಅನ್ಯ ಮಾರ್ಗಗಳಲ್ಲಿ ನನಗೆ ಮತಗಳಿಸಬೇಕಾದ ಅಗತ್ಯತೆಗಳಿಲ್ಲ ಎಂದರು.

ಸಮವಸ್ತ್ರಕ್ಕೂ ನನಗೂ ಸಂಬಂಧವಿಲ್ಲ:
ಬೈಂದೂರಿನಲ್ಲಿ ದೊರೆತ ಸಮವಸ್ತ್ರ ಪ್ರಕರಣವನ್ನು ನಾನು ಮಾಡಿದ್ದು ಎಂದು ಹೇಳುವ ಬಿಜೆಪಿಯವರು ಸರಿಯಾಗಿ ತಿಳಿದು ಹೇಳಬೇಕು. ಅದು ನವೋದಯ ಗುಂಪಿನ ಸಮವಸ್ತ್ರ. ರಾಜಕಾರಣದಲ್ಲಿ ಸುಳ್ಳಿನ ಸರಮಾಲೆ ಸೃಷ್ಟಿಸುವುದು ಬಿಜೆಪಿಯ ಅಭ್ಯಾಸ. ಅದು ಬಿಟ್ಟರೆ ಬೇರೆ ವಿಷಯಗಳೆ ಇಲ್ಲ. ಚುನಾವಣೆಯ ಆರಂಭದಿಂದಲೆ ಇಂತಹ ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ. ಬಿಜೆಪಿಯ ಕಾರ್ಯಕರ್ತನೊಬ್ಬ ಆರೋಪ ಮಾಡಿದ್ದರೇ ಅಷ್ಟು ಪರಿಗಣಿಸುತ್ತಿರಲಿಲ್ಲ. ಆದರೆ ನನ್ನ ಬಗ್ಗೆ ತಿಳಿದಿರುವ ಬೈಂದೂರು ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ ಅವರು ಇಂತಹ ವಿಚಾರ ಹೇಳಿರುವುದು ಬೇಸರ ತರಿಸಿದೆ ಎಂದರು. ನಿರಂತರ ಜನಸಂಪರ್ಕವಿರುವ ನನಗೆ ಮತದಾರರ ಬಗ್ಗೆ ತಿಳಿದಿದೆ. ಮತದಾರರು ಈ ಬಗ್ಗೆ ಗಮನ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ, ಕಾರ್ಯದರ್ಶಿ ನಾಗರಾಜ ಗಾಣಿಗ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಾರ್ಟಿನ್ ಡಯಾಸ್, ಕಾಂಗ್ರೆಸ್ ಹಿಂದೂಳಿದ ಘಟಕದ ಅಧ್ಯಕ್ಷ ಮಂಜುನಾಥ ಖಾರ್ವಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version