Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಂಗೀತ ಲೋಕದ ಭಾವ ಪ್ರಪಂಚವನ್ನು ತೆರೆದಿಟ್ಟ ವಾಣಿ ಜಯರಾಂ

ಕುಂದಾಪ್ರ ಡಾಟ್ ಕಾಂ.
ಕುಂದಾಪುರ: ಕನ್ನಡ ಚಲನಚಿತ್ರರಂಗದಲ್ಲಿ ವಾಣಿ ಜಯರಾಂ ಹೆಸರು ಚಿರಪರಿಚಿತ. ಸಂಗೀತ ಲೋಕದಲ್ಲಿ ತನ್ನ ಗಾನ ಮಾಧುರ್ಯದಿಂದ ಶೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿ ಕೋಟ್ಯಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದ ಗಾನ ಕೋಗಿಲೆ ವಾಣಿಜಯರಾಂ. ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೇ ಹೆಸರು ವಾಸಿಯಾದ ಗಾಯಕಿ ಇವರು. ಕನ್ನಡ, ಮಲಯಾಳಿ, ತೆಲುಗು, ಹಿಂದಿ, ಗುಜರಾತಿ ಸೇರಿದಂತೆ 19 ಭಾಷೆಗಳಲ್ಲಿ ತಮ್ಮ ಗಾನ ಸಿಂಚನವನ್ನು ಹರಡಿದ ಹೆಗ್ಗಳಿಗೆ ಇವರದು. ಇಂತಹ ಅಪ್ರತಿಮ ಸಾಧಕಿಯನ್ನು ಕುಂದಾಪುರಕ್ಕೆ ಕರೆತರುವ ಪ್ರಯತ್ನ ಮಾಡಿ ವಾಣಿಜಯರಾಂ ಅವರನ್ನು ನೇರವಾಗಿ ನೋಡುವ ಮತ್ತು ಅವರ ಗಾನ ಮಾಧುರ್ಯದ ಸವಿಯನ್ನು ನೇರವಾಗಿ ಅನುಭವಿಸಲು ಅವಕಾಶ ಕಲ್ಪಿಸಿಕೊಟ್ಟವರು ಕುಂದಾಪುರದ ಖ್ಯಾತ ವೈದ್ಯ ಹಾಗೂ ಗಾಯಕ ಡಾ. ಸತೀಶ್ ಪೂಜಾರಿಯವರು. ಅವರಿಗೆ ಸಾಥ್ ನೀಡಿದ್ದು ಖ್ಯಾತ ವೈದ್ಯ ಡಾ. ಪ್ರಕಾಶ್ ತೋಳಾರ್ ಮತ್ತು ಸಹನಾ ಡೆವೆಲಪರ‍್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ.

ವಾಣಿಯ ಗಾನಾಮೃತ ಸವಿದ ಅಭಿಮಾನಿಗಳು : ಸಂಘಟಕರು ಕಾರ್ಯಕ್ರಮದ ವೇದಿಕೆಗೆ ಕಹಳೆ ವಾದ್ಯದೊಂದಿಗೆ ವಾಣಿಯವರನ್ನು ಬರಮಾಡಿ ಕೊಳ್ಳುತ್ತಿದ್ದಂತೆ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ವಾಣಿ ಜಯರಾಂ ಅವರಿಗೆ ಗೌರವ ಸ್ವಾಗತವನ್ನು ನೀಡಿದರು. ಕುಂದಾಪುರ ಸೇರಿದಂತೆ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅಭಿಮಾನಿಗಳ ಸ್ತೋಮವನ್ನು ಕಂಡು ಉಲ್ಲಾಸ ಭರಿತರಾದ ವಾಣಿಜಯರಾಂ ತಮ್ಮ ಎಂದಿನ ಶೈಲಿಯಲ್ಲಿ 1960-70-80ರ ದಶಕದ ಚಿತ್ರಗೀತೆಗಳನ್ನು ಮನೋಜ್ಞವಾಗಿ ಎದೆತುಂಬಿ ಹಾಡುವ ಮೂಲಕ ಪ್ರೇಕ್ಷಕರ ನಿರೀಕ್ಷೆಯನ್ನು ಪೂರೈಸಿದರು. ಗಾನ ಸುಧೆಯ ಮೂಲಕ ಸಂಗೀತ ಲೋಕದ ಭಾವ ಪ್ರಪಂಚವನ್ನು ತೆರೆದಿಟ್ಟು ಪ್ರೇಕ್ಷಕರಿಗೆ ಗಾನಾಮೃತವನ್ನು ಉಣಿಸಿದರು. ಜನರ ಕರತಾಡನ ಮುಗಿಲು ಮುಟ್ಟಿತ್ತು. ಅತ್ಯಾಕರ್ಷಕವಾದ ವಿಶಾಲವಾದ ವೇದಿಕೆ ಕಣ್ಮನ ಸೆಳೆಯುವಂತಿತ್ತು. ಅಭಿಮಾನಿಗಳಿಗೆ ಇನ್ನಷ್ಟು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಎರಡು ಎಲ್‌ಇಡಿ ವಾಲ್‌ಗಳು ವಾಣಿಜಯರಾಂ ಅವರ ಹಾಡುಗಾರಿಕೆಯನ್ನು ಹತ್ತಿರದಿಂದ ತೋರಿಸುತ್ತಿದ್ದವು.

ಹಳೆಯ ಚಿತ್ರ ಗೀತೆಗಳ ಮೆಲುಕು : ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಇಂದಿಗೂ ಹಚ್ಚ ಹಸಿರಾಗಿ ಉಳಿದಿರುವ ಹೋದೆಯಾ ದೂರ ಓ.. ಜೊತೆಗಾರ, ಪ್ರಿಯತಮಾ ಕರುಣೆಯ ತೊರೆಯಾ.., ತೆರೆದಿದೆ ಮನೆ ಓ ಬಾ ಅತಿಥಿ.., ಕನಸಲು ನೀನೇ ಮನಸಲೂ ನೀನೇ.. ಕನ್ನಡ ಚಿತ್ರಗೀತೆಗಳು ಮತ್ತೊಮ್ಮೆ ವಾಣಿಜಯರಾಂ ಅವರ ಗಾಯನದಲ್ಲಿ ಇಂಪಾಗಿ ಮೂಡಿಬಂದು ಅಭಿಮಾನಿಗಳ ಮೈಮನಗಳಲ್ಲಿ ರೋಮಾಂಚನ ಸೃಷ್ಠಿಸಿತ್ತು. ಹಳೆಯ ಚಿತ್ರ ಗೀತೆಗಳ ಮ್ಯ ಮನಗಳಲ್ಲಿ ಪುಳಕ ನೀಡಿತು. ಕಾರ್ಯಕ್ರಮದ ಇನ್ನೊಂದು ಆಕರ್ಷಣೆ ಎಂದರೆ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ, ಗಾಯಕರೂ ಆದ ಡಾ. ಸತೀಶ್ ಪೂಜಾರಿಯವರು ಕಳೆದ ಬಾರಿ ಖ್ಯಾತ ಬಹು ಭಾಷಾ ಗಾಯಕಿ ಎಸ್.ಜಾನಕಿಯವರೊಂದಿಗೆ ಚಿತ್ರಗೀತೆಗಳನ್ನು ಹಾಡಿ ಕುಂದಾಪುರದ ಜನತೆಯಿಂದ ಸೈ ಎನಿಸಿಕೊಂಡಿದ್ದರು. ಈ ಬಾರಿಯು ನಾ ನಿನ್ನ ಮರೆಯಲಾರೆ….., ಬೆಸುಗೆ… ಬೆಸುಗೆ… ಜೀವನವೆಲ್ಲ ಸುಂದರ ಬೆಸುಗೆ.. ಹಾಡನ್ನು ಅತ್ಯುತ್ತಮವಾಗಿ ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ವಾಣಿಜಯರಾಂ ಅವರಿಗೆ ಜೊತೆಯಾಗಿ ಹಾಡುವ ಮೂಲಕ ತಮ್ಮ ಗಾಯನ ಪ್ರತಿಭೆಯ ಸಾಮರ್ಥ್ಯವನ್ನು ಸಾವಿರಾರು ಪ್ರೇಕ್ಷಕರ ಮುಂದೆ ತೆರೆದಿಟ್ಟು ಅವರ ಅಭಿಮಾನಕ್ಕೆ ಪಾತ್ರರಾದರು. ಚಲನಚಿತ್ರ ಹಿನ್ನಲೆ ಗಾಯಕ ರಮೇಶ್ಚಂದ್ರ, ಮೊದಲಾದ ಗಾಯಕರು ಅತ್ಯುತ್ತಮವಾಗಿ ಗಾಯನ ಸುಧೆಯನ್ನು ಹರಿಸಿದರು. ರಿಯಾಲಿಟಿ ಶೋ ಖ್ಯಾತಿಯ ರಾಜ್ ಗೋಪಾಲ್ ಮತ್ತು ಬಳಗದವರು ಸಂಗೀತ ಪರಿಕರಗಳನ್ನು ನುಡಿಸಿದರು.

ವಾಣಿ ಜಯರಾಂ ಮನದ ಮಾತು : ಇಂದು ನನಗಾಗಿ ಶುಭದಿನ, ನಿಮಗಾಗಿ ಆನಂದ ದಿನ. ಸಂಗೀತ ಲೋಕದ ಭಾವ ಪ್ರಪಂಚದ ಸವಿಯನ್ನು ಅನುಭವಿಸಲು ಆಗಮಿಸಿದ ಕುಂದಾಪುರದ ಜನತೆ, ಅಭಿಮಾನಿಗಳನ್ನು ಕಂಡು ಮನಸ್ಸು ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿ-ಪ್ರೇಮ ಎಂದೆಂದಿಗೂ ನನಗಿರಲಿ ನಿಮಗಾಗಿ ಎಂದೆಂದಿಗೂ ನಾನು ಹಾಡುತ್ತಿರುತ್ತೇನೆ ಎಂದು ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿಜಯರಾಂ ಮನದ ಮಾತುಗಳನ್ನು ಅಭಿಮಾನಿಗಳೆದುರು ತೆರೆದಿಟ್ಟರು.

ಅವರು ಫೆ.21 ರಂದು ಮನಸ್ಮಿತ ಫೌಂಡೇಶನ್ ಕೋಟದ ಆಶ್ರಯದಲ್ಲಿ ಸಹನಾ ಎಸ್ಟೇಟ್ ಕೋಟೇಶ್ವರದ ಸಹಭಾಗಿತ್ವದಲ್ಲಿ ದಕ್ಷಿಣ ಭಾರತದ ಹೆಸರಾಂತ ಚಲನಚತ್ರ ಹಿನ್ನಲೆ ಗಾಯಕಿ ವಾಣಿಜಯರಾಂ ಅವರ ಸಂಗೀತ ರಸ ಸಂಜೆ ವಾಣಿಯ ಸ್ವರ ಝೆಂಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಾಣಿಜಯರಾಂ ಅವರನ್ನು ಸನ್ಮಾನಿಸಿದ ಖ್ಯಾತ ಉದ್ಯಮಿ, ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ ನಾವು ಚಿಕ್ಕವರಿದ್ದಾಗ ಸಿನಿಮಾಗಳಲ್ಲಿ ಹಾಡುಗಳು ಬರುವಾಗ ಸಿನಿಮಾದಲ್ಲಿ ನಟಿಸುತ್ತಿರುವ ನಟನು ಹಾಡುತ್ತಿದ್ದಾನೆ ಎಂದು ಭಾವಿಸಿದ್ದವು. ನಿಜವಾಗಿ ಹಾಡುವವರು ಯಾರು ಎಂದು ಗೊತ್ತಾಗುತ್ತಿರಲಿಲ್ಲ. ಇಂದು ಅದ್ಭುತ ಗಾನ ಸುಧೆಯನ್ನು ಹರಿಸಿರುವ ವಾಣಿಜಯರಾಂ ಅವರನ್ನು ನೇರವಾಗಿ ನೋಡುವ ಅವಕಾಶ ನಮಗೆ ಲಭಿಸಿದೆ. ಅವರ ಗಾನ ಮಾಧುರ್ಯಕ್ಕೆ ನಾವೆಲ್ಲರೂ ಮಂತ್ರ ಮುಗ್ಧರಾಗಿದ್ದೇವೆ. ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಸಂಘಟಿಸಿದವರಿಗೆ ಅಭಿನಂದನೆಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಾಲನೆ : ಕಾರ್ಯಕ್ರಮವನ್ನು ಖ್ಯಾತ ಗಾಯಕಿ ವಾಣಿಜಯರಾಂ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘಟರಾದ ಡಾ.ಸತೀಶ್ ಪೂಜಾರಿ, ಡಾ.ಪ್ರಕಾಶ್ ತೋಳಾರ್, ಸುರೇಂದ್ರ ಶೆಟ್ಟಿ, ಶ್ರೀಮತಿ ನೇಹಾ ಪೂಜಾರಿ, ಶ್ರೀಮತಿ ಸವಿತಾ ತೋಳಾರ್, ಶ್ರೀಮತಿ ಸಹನಾ ಶೆಟ್ಟಿ, ಬಿಜು ನಾಯರ್, ರಾಜೇಂದ್ರ ಸುವರ್ಣ, ದಾವೂದ್ ಬಿ.ಕೆ, ಯಾಕೂಬ್ ಖಾದರ್ ಗುಲ್ವಾಡಿ, ಅಬ್ದುಲ್ ಸಲಾಂ ಮೊದಲಾದವರು ಉಪಸ್ಥಿತರಿದ್ದರು.
ಮನಸ್ಮಿತ ಫೌಂಡೇಶನ್‌ನ ನಿರ್ದೇಶಕ ಡಾ.ಪ್ರಕಾಶ್ ತೋಳಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದಯ ಸನ್ಮಾನ ಪತ್ರ ವಾಚಿಸಿದರು. ಆರ್.ಜೆ. ಪ್ರಸನ್ನ, ಆರ್.ಜೆ. ನಯನ ಕಾರ್ಯಕ್ರಮ ನಿರೂಪಿಸಿದರು. ಮನಸ್ಮಿತ ಫೌಂಡೇಶನ್‌ನ ನಿರ್ದೇಶಕ ಡಾ. ಸತೀಶ್ ಪೂಜಾರಿ ವಂದಿಸಿದರು.

Exit mobile version