Kundapra.com ಕುಂದಾಪ್ರ ಡಾಟ್ ಕಾಂ

ಭಗವಂತ ಭಕ್ತಿಗೆ ಒಲಿಯುತ್ತಾನೆ: ಅಪ್ಪಣ್ಣ ಹೆಗ್ಡೆ

ಬೈಂದೂರು: ಕರಾವಳಿ ಭಾಗದಲ್ಲಿ ದೈವಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಭಗವಂತನ ಮುಂದೆ ನಮ್ಮ ಕಷ್ಟಗಳನ್ನು ನಿವೇದನೆ ಮಾಡಿಕೊಳ್ಳಬಹುದು. ಆದರೆ ದೈವಗಳು ಆವೇಶಗಳ ಮೂಲಕ ನೇರವಾಗಿ ಮಾತುಕತೆಗೆ ಸಿಗುತ್ತದೆ. ಇದು ದೈವ-ದೇವರುಗಳ ನಡುವಿನ ಭಕ್ತರ ಭಾವನೆಗಳು ಅಷ್ಟೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

ಶಿರೂರು ಶ್ರೀ ಜೈನ ಶೇಡಿಬೀರ ದೈವ ಪರಿವಾರ ದೇವರು ಹಾಗೂ ಶ್ರೀ ನಾಗದೇವರ ಪುನರ್ ಪ್ರತಿಷ್ಟಾಪನಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಶ್ರದ್ಧಾ, ಭಕ್ತಿಗೆ ಒಲಿಯದ ದೈವ-ದೇವರುಗಳಿಲ್ಲ. ಭಕ್ತರ ಭಕ್ತಿಗೆ ಭಗವಂತ ಒಲಿಯುತ್ತಾನೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ಜನರಿಗೆ ಧಾರ್ಮಿಕತೆಯ ಭಾವನೆಗಳು ಹೆಚ್ಚುತ್ತಿರುವುದರಿಂದ ಧಾರ್ಮಿಕ ಕೇಂದ್ರಗಳು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ನಮ್ಮಲ್ಲಿರುವ ದೈವೀಕ ಭಾವನೆಗಳನ್ನು ಉದ್ದೀಪನೆಗೊಳಿಸುವ ಮೂಲಕ ಶ್ರದ್ದಾ, ಭಕ್ತಿಯಿಂದ ಆರಾಧಿಸಿದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದರು.

ಇಂದಿನ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸತೊಡಗಿದ್ದು, ಪ್ರತ್ಯೇಕ ಸಂಸಾರದ ಆಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಇದರಿಂದ ಕೌಟುಂಬಿಕ ಜೀವನ ಹಾಳಾಗಿ ಕೆಲವು ಸಂಸಾರಗಳು ಛಿದ್ರವಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಹೀಗಾಗಿ ಕುಟುಂಬದಲ್ಲಿ ಸಾಮರಸ್ಯ ನಾಶವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯಗಳು ಸ್ವಾಭಾವಿಕ. ಹಿರಿಯರು, ಬಲ್ಲವರು ಅದನ್ನು ಹೆಚ್ಚು ಭಿನ್ನವಾಗುವುದಕ್ಕೆ ಅವಕಾಶ ಕೊಡಬಾರದು ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಮಂಜಯ್ಯ ಶೆಟ್ಟಿ ಆರ‍್ಮಕ್ಕಿ ಅಧ್ಯಕ್ಷತೆವಹಿಸಿದ್ದರು. ದೈವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಸುಕೇಶ್ ಶೆಟ್ಟಿ ಆರ‍್ಮಕ್ಕಿ, ಖಜಾಂಚಿ ಪ್ರಕಾಶ ಪ್ರಭು ಉಪಸ್ಥಿತರಿದ್ದರು. ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್. ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಸಿದರು. ಕಾರ್ಯದರ್ಶಿ ರವೀಂದ್ರ ಶೆಟ್ಟಿ ಆರ‍್ಮಕ್ಕಿ ವಂದಿಸಿ, ಹೆಚ್. ಕೃಷ್ಟಪ್ಪ ಶೆಟ್ಟಿ ನಿರೂಪಿಸಿದರು. ನಂತರ ಸ್ಥಳೀಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ಹಿರಿಯಡಕ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Exit mobile version