Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭೆ ವಾಗ್ವಾದ: ದುಡ್ ಕೇಂಬ್ದ್ ಕಿಸಿಗೆ ಹಾಯ್ಕಂಬುಕ್ ಅಲ್ಲ. ಅಭಿವೃದ್ಧಿ ಮಾಡುಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪುರಸಭೆ ಅಭಿವೃದ್ಧಿಗೆ ದುಡ್ಡಿಲ್ಲ ಅಂತ್ರಲ್ಯಾ.. ಹಂಗಂದ್ರೆ ಹ್ಯಾಂಗೆ. ನಮ್ ಕಾಲದ್ಹಾಗೆ ಅಭಿವೃದ್ಧಿ ಮಾಡ್ಲಿಲ್ಯಾ? ನಮ್ ಕಿಸಿಗ್ ಹಾಯ್ಕಂಬುಕೆ ದುಡ್ಡ್ ಕೇಂತಿಲ್ಲ. ಪುರಸಭೆ ಅಭಿವೃದ್ಧಿಗೆ ಕೇಂತಿಪ್ಪುದ್. ನಿಮ್ದ್ ಸಚಿವರಿದ್ರ್, ಸರಕಾರ ಇತ್. ಹಾಂಗಿದ್ರೂ ಅನುದಾನ ಕೇಂಬುಕ್ ಹಿಂದಾಯ್ಕಂಬ್ದ್ ಯಾಕೆ? ನಮ್ ಅಧಿಕಾರ ಇಪ್ಪತಿಗೆ ಪುರಸಭೆಗೆ ಮಸ್ತ್ ಅನುದಾನ ತಂದಿತ್.

ಅನುದಾನ್ ತಂದಿತ್ ಅಂದ್ಹೇಳಿ ಹೇಳ್ತ್ರಿ ಬಿಟ್ರೆ ಏಷ್ಟ್ ಅಂದೇಳಿ ಹೇಳಿ ಹೇಳುದಿಲ್ಲೆ. ೫ ವರ್ಷದಲ್ಲ್ ೫ ಕೋಟಿ ಹಣ ತಂದ್ಕಂಡ್ ಅನುದಾನ ತಂದಿತ್ ಅಂತ್ರಿ. ಆಗ ನಿಮ್ದೇ ಸರ್ಕಾರ ಇದ್ದಿತ್ ಆರೂ ಜಾಸ್ತಿ ಅನುದಾನ ತಪ್ಪುಕ್ ಆಯಿಲ್ಲೆ ನಿಮ್ಗೆ. ನಮ್ ಸರ್ಕಾರ ಬಂದ್ ಎರ್ಡೂವರೇ ವರ್ಷ ಆಯ್ತ್ ಅಷ್ಟೇ. ಇನ್ನು ಅನುದಾನ ಕೊಡ್ತೆ ಅಂದೇಳಿ ಉಸ್ತುವಾರಿ ಸಚಿವ್ರ್ ಹೇಳಿರ್. ಇನ್ನೂ ಎರ್ಡೂವರಿ ವರ್ಷ ಇತ್. ನಾವು ಅನುದಾನ್ ತಕಬತ್ತ್. ಅಭಿವೃದ್ಧಿ ಮಾಡಿ ತೋರ‍್ಸತ್ ಕಾಣಿ.

ಕುಂದಾಪುರ ರಿಂಗ್ ರಸ್ತೆಯ ಅಭಿವೃದ್ಧಿಯಗಾಗಿ ಪುರಸಭೆ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪುರಸಭಾ ಸದಸ್ಯರು ಕುಂದಗನ್ನಡದಲ್ಲಿ ವಾಕ್ಸಮರ ನಡೆಸಿದ ಪರಿ ಇದು. ನಮ್ ಕಾಲದಲ್ಲಿ ಏನಾಯಿತ್ ಅಂಬುದು ಜನಿಗ್ ಗೊತಿತ್. ಅದನ್ನ್ ನಾವ್ ಹೇಳ್ಕ್ ಅಂದಿಲ್ಲ. ಬೇಕಾರ್ ನೀವೆ ಕುಂದಾಪುರದ ಜನಿನ್ ಕೇಣಿ. ಆಗ ನಿಮ್ಗೆ ಗೊತ್ತಾತ್.

ಬರಿ ಬಾಯಿ ಮಾತಗ್ ಹೇಳ್ರೆ ಆತಿಲ್ಲ. ನಾವ್ ಹಾಕಿದ್ ಸವಾಲನ್ ಪ್ರತಿಷ್ಠೆಯಾಗಿ ಸ್ವೀಕರ‍್ಸಿನಿ ಕಾಂಬೊ. ಭರವಸೆ ಕೊಟ್ಟುಕೂಡ್ಲೆ ಅನುದಾನ ಬತ್ತಿಲ್ಲ. ಇನ್ ಎರಡು ವರ್ಷದಲ್ಲಿ ಎಷ್ಟ್ ಅನುದಾನ ತಕಬತ್ರಿ ಅಂದ್ ನಾವೂ ಕಾಂತೊ. ಅಭಿವೃದ್ಧಿ ವಿಷಯದಾಗ್ ರಾಜಕೀಯ ಮಾಡುದ್ ಬೇಡ. ಕಳೆದ ಸಾಲಿನ ೫ ಕೋಟಿ ಹೆಚ್ಚುವರಿ ಹಣ, ನಗರೋತ್ಥಾನದ ಅನುದಾನದ ಶೇ.೧೫ ಹಣನ್ ರಿಂಗ್ ರೋಡ್ ಅಭಿವೃದ್ಧಿಗೆ ಮೀಸಲಿಟ್ರೆ ಆತಿಲ್ಯಾ?

ರಿಂಗ್ ರಸ್ತೆ ಆರೆ ಕುಂದಾಪುರಕ್ಕೆ ಮಸ್ತ್ ಅನುಕೂಲ ಆತ್. ಪ್ಯಾಟಿ-ಪಟ್ಟಣದ್ ವಾಹನ ದಟ್ಟಣೆ ಕಡ್ಮಿ ಆತ್. ಫಸ್ಟ್ ಖಾಸಗಿ ಸಾಮಿಲ್ ಹತ್ರದ್ ಹೊಂಡ ಮುಚ್ಚಿ ರಸ್ತೆ ಸರಿ ಮಾಡಿನಿ. ರಸ್ತೆ ಒತ್ತುವರಿ ಆತಿತ್. ರಸ್ತೆ ಮೇಲೆ ಬಲೆ, ದೋಣಿ ಎಲ್ಲಾ ಇಡ್ತ್ ಇದ್ರ್ ಮೊದ್ಲ್ ಅದನ್ ತೆಗಿನಿ. ರಸ್ತೆ ಇಪ್ಪುದ್ ಸಂಗ್ರಾಹಕ್ಕಲ್ಲ. ಸಂಚಾರಕ್ಕೆ. ರಿಂಗ್ ರಸ್ತೆ ಅಭಿವೃದ್ಧಿ ಮಾಡುಕ್ ಸಭೆ ಮಾಡ್ತಿತ್ತಿದ್ರಿಲ್ಯಾ. ಅದ್ರದ್ ನೀಲಿನಕ್ಷೆ ತಯಾರಾಯಿತಾ? ರಸ್ತೆ ಎತ್ತರ್ ಮಾಡ್ಕ್, ಡಬಲ್ ರಸ್ತೆ ಮಾಡ್ಕ್, ವಾಕಿಂಗ್ ಟ್ರ್ಯಾಕ್ ಮಾಡ್ಕ್. ಇದನ್ನೆಲ್ಲ ಇಟ್ಕಂಡ್ ಅಭಿವೃದ್ಧಿ ಮಾಡಿದ್ರೆ ಸರಿ ಆತ್. ಮೊದ್ಲು ರಸ್ತೆ ಒತ್ತುವರಿ ಮಾಡ್ಕಂಡದ್ದನ್ ತೆರವು ಮಾಡಿ ಎಲ್ಲ ಸರಿ ಆತ್.

ಕುಂದಾಪುರ ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮಧೇನು, ಸದಸ್ಯರಾದ ಮೋಹನದಾಸ್ ಶೆಣೈ, ಸತೀಶ್ ಶೆಟ್ಟಿ, ರಾಜೇಶ್ ಕಾವೇರಿ, ರವಿರಾಜ ಖಾರ್ವಿ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ವಿಠ್ಠಲ್ ಕುಂದರ್ ಸಭೆಯಲ್ಲಿ ಮಾತನಾಡಿದರು. ಪುರಸಭಾ ಅಧ್ಯಕ್ಷೆ ಕಲಾವತಿ ಯು.ಎಸ್. ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮಧೇನು,ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ, ಮುಖ್ಯಾಧಿಕಾರಿ ಗೋಪಾಲಕೃಷ್ಟ ಶೆಟ್ಟಿ ಉಪಸ್ಥಿತರಿದ್ದರು.

 

Exit mobile version