ಗಂಗೊಳ್ಳಿ : ನಮ್ಮ ಬಗೆಗೆ ಬೇರೆಯವರ ಅಭಿಪ್ರಾಯಗಳಿಗೆ ಕಿವಿಗೊಡುವ ಮುನ್ನ ನಾವು ನಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ರೂಪಿಸಿಕೊಳ್ಳುವುದರ ಕಡೆಗೆ ಗಮನವನ್ನು ನೀಡಬೇಕು.ನಮ್ಮ ತಂದೆತಾಯಿಗಳ ಅಂತರಾಳವನ್ನು ಅರಿಯುವ ಸಾಮರ್ಥ್ಯ ನಮ್ಮಲ್ಲಿರಬೇಕು. ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಪ್ರಾಯೋಜಿತ ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ ಹದಿನೈದನೇ ವರುಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಸೆಲ್ಫಿ ಕ್ಲಿಕ್ಕಿಸಿ ಲೈಕುಗಳನ್ನು ಲೆಕ್ಕ ಹಾಕುವುದು ಸಾಧನೆಯಲ್ಲ. ಸ್ವಂತ ಸಾಧನೆಗಳಿಂದ ನಾವು ಗುರುತಿಸಿಕೊಳ್ಳುವಂತಾಗಬೇಕು. ಹಿರಿಯರ ಆದರ್ಶಗಳನ್ನು ಅನುಸರಿಸಿ ನಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಶ್ರಮಪಡಬೇಕು.ದೇಶಭಕ್ತಿಯ ಸಂಕೇತಗಳನ್ನು ಧರಿಸಿ ಹಂಚಿಕೊಂಡರಷ್ಟೆ ಸಾಲದು. ದೇಶದ ಬಗೆಗೆ ತಿಳಿದುಕೊಳ್ಳುವ ನೈಜ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ಶ್ರೀ ಮಾತಾ ಆಸ್ಪತ್ರೆ ಕುಂದಾಪುರದ ಮನೋವೈದ್ಯರಾದ ಡಾ.ಪ್ರಕಾಶ್ ತೋಳಾರ್ ಅಧ್ಯಕ್ಷತೆ ವಹಿಸಿದ್ದರು.ಕುಂದಾಪುರ ಕೈರಾಲಿ ಸುಹೃದ್ವೇದಿಯ ಅಧ್ಯಕ್ಷ ಕೆ.ಪಿ.ಶ್ರೀಶನ್, ಗಂಗೊಳ್ಳಿಯ ಉದ್ಯಮಿ ವೆಂಕಟೇಶ್ ಬಿ ಶೆಣೈ,ರುಡ್ ಸೆಟ್ ಬ್ರಹ್ಮಾವರದ ಉಪನ್ಯಾಸಕರಾದ ಕರುಣಾಕರ ಜೈನ್,ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಜಿ. ರಾಘವೇಂದ್ರ ಖಾರ್ವಿ ಉಪಸ್ಥಿತರಿದ್ದರು.
ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ ಗೌರವಾಧ್ಯಕ್ಷ ಅಭಿನಂದನ ಎ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.ಗೌರವ ಕಾರ‍್ಯದರ್ಶಿ ಜಿ.ಸೂರ್ಯಕಾಂತ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ವರದಿ ವಾಚಿಸಿದರು.ಯು ರಾಧಾಕೃಷ್ಣ ಶ್ಯಾನುಭಾಗ್ ವಿದ್ಯಾರ್ಥಿ ವೇತನ ಫಲಾನುಭವಿಗಳ ಪಟ್ಟಿ ಓದಿದರು. ಸುಂದರ್ ಗಂಗೊಳ್ಳಿ ಮತ್ತು ವೀಣಾ ಹರೀಶ್ ಖಾರ್ವಿ ಕಾರ‍್ಯಕ್ರಮವನ್ನು ನಿರೂಪಿಸಿದರು..ವಿಕ್ರಮ್ ಖಾರ್ವಿ ಧನ್ಯವಾದ ಅರ್ಪಿಸಿದರು.