Kundapra.com ಕುಂದಾಪ್ರ ಡಾಟ್ ಕಾಂ

ಕೋಟ-ಪಡುಕೆರೆ ಸರಕಾರಿ ಕಾಲೇಜು: ಪುನರ್‌ಮಿಲನದಲ್ಲಿ ಹಳೆ ವಿದ್ಯಾರ್ಥಿಗಳು, ತಾರೆ, ಗಣ್ಯರ ಸಂಗಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವನ್ನು ರೂಪಿಸಿಕೊಳ್ಳಬೇಕಾದರೇ ಶಿಕ್ಷಣ ಅತ್ಯಗತ್ಯ. ಶಾಲಾ ಕಾಲೇಜಿನಲ್ಲಿ ಕಲಿತ ಬಳಿಕ ಅಲ್ಲಿನ ಋಣವನ್ನು ಮರೆಯದೇ ಶಾಲೆಯ ಅಭಿವೃದ್ಧಿಗಾಗಿ ಚಿಂತಿಸುವ ನೆಲೆಯಲ್ಲಿ ಪುನರ್‌ಮಿಲನಗೊಂಡ ಹಳೆ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ ಎಂದು ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನಾ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ. ಜಿ. ಶಂಕರ ಹೇಳಿದರು.

ಅವರು ಕೋಟ-ಪಡುಕೆರೆ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಆಯೋಜಿಸದ ಪುನರ್‌ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚಿತ್ರನಟ ವಿಜಯ ರಾಘವೇಂದ್ರ ಮಾತನಾಡಿ ಹಳೆಯ ದಿನಗಳನ್ನು ಹೊಸತಾಗಿ ನೆನಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಖುಷಿ ನೀಡಿದೆ ಎಂದು ಕೊನೆಯಲ್ಲಿ ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಹಾಡಿದಾಗ ವಿದ್ಯಾರ್ಥಿಗಳು ಚಪ್ಪಾಳೆಯ ಸ್ಪಂದನ ನೀಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಬದುಕಿನಲ್ಲಿ ಪ್ರಯತ್ನವಿಲ್ಲದೇ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಪ್ರಯತ್ನ ಪಡುವಿದರಲ್ಲಿಯೇ ಸೋತರೆ ಯಶಸ್ಸು ಅಸಾಧ್ಯ ಎಂದರು. ಅಕ್ಷರಾಭ್ಯಾಸಕ್ಕೂ, ವಿದ್ಯಾವಂತರಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಇವುಗಳ ನಡುವಿನ ಗೆರೆಯನ್ನು ಅರಿಯಬೇಕಿದೆ ಎಂದರು.

ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮಾತನಾಡಿ ಖಾಸಗಿಕರಣದ ಕಪಿಮುಷ್ಠಿಯಿಂದಾಗಿ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪಾಲೂ ಕೂಡ ದೊಡ್ಡ ಪ್ರಮಾಣದಲ್ಲಿಯೇ ಇದೆ ಎನ್ನುವುದು ವಾಸ್ತವ ಎಂದರು.

ಕಾಲೇಜು ಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಪ್ರಾಂಶುಪಾಲ ಡಾ. ಉದಯಕುಮಾರ್ ಶೆಟ್ಟಿ, ವಿಶ್ರಾಂತ ಮುಖ್ಯೋಪಧ್ಯಾಯ ವಿಠಲ ವಿ. ಗಾವ್ಕರ್, ಪ್ರೌಢಶಾಲಾ ಮುಖ್ಯೋಪಧ್ಯಾಯ ಪ್ರಕಾಶ್ ಹೆಬ್ಬಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್, ಪುನರ್‌ಮಿಲನ ಸಮಿತಿ ಸಂಚಾಲಕರಾದ ಯೋಗೇಂದ್ರ, ವಾರಿಜಾ ಉಪಸ್ಥಿತರಿದ್ದರು.

ಯಕ್ಷ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹಸಿರು ಕ್ರಾಂತಿ ಹರಿಕಾರೆ ಸಾಲುಮರದ ತಿಮ್ಮಕ್ಕ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ನಟ ವಿಜಯ ರಾಘವೇಂದ್ರ, ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಕಾಲೇಜು ಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ. ಜಿ. ಶಂಕರ್, ಅಧ್ಯಕ್ಷ ಆನಂದ ಸಿ. ಕುಂದರ್ ಹಾಗೂ ಕಾಲೇಜು ಹಿಂದಿನ ಈಗಿನ ಪ್ರಾಂಶುಪಾಲರನ್ನು ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರವೀಣ ಕೆ. ಸ್ವಾಗತಿಸಿದರು. ಸಾಲು ಮರದ ತಿಮ್ಮಕ್ಕ ಅವರಿಂದ ಅತಿಥಿಗಳಿಗೆ ಗಂಧದ ಸಹಿ ನೀಡಿ ಸ್ವಾಗತಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ ರಾಜೇಂದ್ರ ಎಸ್. ನಾಯಕ್ ಪ್ರಸ್ತಾವನೆಗೈದರು. ಪತ್ರಕರ್ತ ರಾಜೇಶ್ ಕೆ.ಸಿ ನಿರೂಪಿಸಿದರು.

ಚಿತ್ರ ವರದಿ: ಸುನಿಲ್ ಹೆಚ್. ಜಿ. ಬೈಂದೂರು

Exit mobile version