Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳಗೆ ಉತ್ಕೃಷ್ಟ-ವೈಜ್ಞಾನಿಕ ಶಿಕ್ಷಣ ನೀಡುವುದು ಪ್ರಧಾನಿ ಕನಸು : ಸುರೇಶ ಬಟವಾಡಿ

ಬೈಂದೂರು: ರಾಷ್ಟ್ರೀಯ ಆವಿಷ್ಕಾರ ಅಭಿಯಾನವು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾದ ಒಂದು ಭಾಗವಾಗಿದ್ದು, ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಕಲಿಕಾ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಮಾಡಿದೆ ಎಂದು ಜಿಪಂ ಸದಸ್ಯ ಸುರೇಶ ಬಟವಾಡಿ ಹೇಳಿದರು.

ಇಲ್ಲಿನ ಮೇಲ್ಪಂಗ್ತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಸರ್ವ ಶಿಕ್ಷಣ ಅಭಿಯಾನದ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ-2016 ಯೋಜನೆಯ ಶಿರೂರು ಕ್ಲಸ್ಟರ್ ವಿಭಾಗದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಹೊಸ ಆವಿಷ್ಕಾರ ಮತ್ತು ಪ್ರಯೋಗಗಳ ಮೂಲಕ ಪ್ರಾಥಮಿಕ ಹಂತದಿಂದಲೇ ಉತ್ಕೃತ ಮಟ್ಟದ ಶಿಕ್ಷಣ ಎಲ್ಲಾ ಮಕ್ಕಳಿಗೂ ನೀಡಬೇಕೆನ್ನುವ ಹಾಗೂ ವೈಜ್ಞಾನಿಕವಾಗಿ ಮಕ್ಕಳು ಬೆಳೆಯಬೇಕೆಂಬ ಪ್ರಧಾನಿ ಮೋದಿಯವರ ಕನಸು ಈ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿದೆ ಎಂದರು.

ವೈಜ್ಞಾನಿಕ ಮನೋಭಾವನೆ, ಹೊಸ ಚಿಂತನೆಗಳನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ಶಿಕ್ಷಕರು ಪ್ರೇರಣೆ ನೀಡಬೇಕು. ಒಂದು ಶಾಲೆ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸಬೇಕಾದರೆ ಅದು ಕ್ರೀಯಾಶಿಲ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದ ಬಟವಾಡಿ, ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಲ್ಲಿ ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಪ್ರಯೋಗಾಲಯಕ್ಕೆ ಪೀಠೋಪಕರಣ ನೀಡಿದ ಉದ್ಯಮಿ ಮಣೆಗಾರ್ ಅಬ್ದುಲ್ ರೆಹಮಾನ್ ಇವರು ಸಿ.ವಿ.ರಾಮನ್ ಪ್ರಯೋಗಾಲಯ ಹಾಗೂ ಶಿರೂರು ಹೊಸ್ಮನೆ ದಯಾನಂದ ಆರ್. ಶೆಟ್ಟಿ ತಮ್ಮ ತಾಯಿಯ ಸ್ಮರಣಾರ್ಥ ನೀಡಿದ ಕುಡಿಯುವ ನೀರಿನ ಘಟಕವನ್ನು ಕುಟುಂಬ ಸದಸ್ಯ ಸತೀಶ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.

ಶಿರೂರು ಗ್ರಾಪಂ ಸದಸ್ಯೆ ಸರಳಾ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಕೆ., ಪ್ರಭಾಕರ ಬಿಲ್ಲವ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಂಕರ್ ಸ್ವಾಗತಿಸಿ, ಸಶಿಅ ಉಪ ಯೋಜನಾಧಿಕಾರಿ ಚಂದ್ರ ನಾಯ್ಕ್ ಪ್ರಾಸ್ತಾವಿಸಿದರು. ಶಿಕ್ಷಕ ಸೋಮರಾಯ ಜನ್ನು ನಿರೂಪಿಸಿ, ಸಿ.ಎನ್.ಬಿಲ್ಲವ ವಂದಿಸಿದರು.

Exit mobile version