Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಹಾಸ್ಟೆಲ್ ಸ್ಥಳಾಂತರಿಸಿದರೇ ಹೋರಾಟ: ಎಸ್‌ಎಫ್‌ಐ ಎಚ್ಚರಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ನಗರ ಪ್ರದೇಶಗಳಲ್ಲಿ ಸರಕಾರಿ ಹಾಸ್ಟೆಲ್ ಸ್ವಂತ ಕಟ್ಟಡವಿಲ್ಲದೇ ಅವ್ಯವಸ್ಥೆಯಿಂದ ಕೂಡಿರುವಾಗ ನೆಹರೂ ಮೈದಾನದ ಬಳಿಯ ಸರಕಾರಿ ಕಟ್ಟಡದಲ್ಲಿನ ಹಾಸ್ಟೆಲನ್ನು ಕೋಟೇಶ್ವರದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಯತ್ನದ ಹಿಂದೆ ಯಾರದ್ದೂ ಲಾಭಿ ಇಲ್ಲದಿಲ್ಲ. ಅನಗತ್ಯವಾಗಿ ಹಾಸ್ಟೆಲ್‌ನ್ನು ಕೋಟೇಶ್ವರಕ್ಕೆ ಸ್ಥಳಾಂತರಿಸಿ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟುಮಾಡಿದರೇ ಉಗ್ರ ಹೋರಾಟವನ್ನು ಕೈಗೊಳ್ಳವುದಾಗಿ ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಎಚ್ಚರಿಸಿದ್ದಾರೆ.

ಕುಂದಾಪುರದ ಹಾಸ್ಟೆಲ್ ಸ್ಥಳಾಂತರ ಹಾಗೂ ಇನ್ನಿತರ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕ ಕುಂದಾಪುರದ ಮಿನಿವಿಧಾನದ ಸೌಧದ ಎದರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಸ್‌ಎಪ್‌ಐ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಅಕ್ಷಯ ವಡೇರಹೋಬಳಿ ಮಾತನಾಡಿ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದ ಕಾರಣ ಸರಕಾರಿ ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದು ವಿದ್ಯಾರ್ಥಿಗಳ ಅಧ್ಯಯನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಮುಂದಿನ ರಾಜ್ಯ ಬಜೆಟ್‌ನಲ್ಲಿ ಶೇ.೩೦ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಲಿ ಎಂದು ಆಗ್ರಹಿಸಿದರು. ಕುಂದಾಪುರದ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್‌ಎಫ್‌ಐ ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ, ವಿದ್ಯಾರ್ಥಿ ಮುಖಂಡರಾದ ವಸಂತ, ಮಂಜುನಾಥ, ಉಮೇಶ್, ಕಿರಣ ಉಪಸ್ಥಿತರಿದ್ದರು.

Exit mobile version