ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ರಂಗಭೂಮಿಯು ವಿಚಾರ ಪ್ರಚೋದಕ ಹಾಗೂ ಮನೋರಂಜನೆ ಆಧಾರಿತ ನಾಟಕಗಳೆಂಬ ಎರಡು ಕವಲುಗಳಾಗಿ ಸಾಗುತ್ತಿದೆ. ಕೇವಲ ಮನೋರಂಜನೆಯನ್ನು ಉದ್ದೇಶವಾಗಿಟ್ಟುಕೊಂಡು ಆರ್ಥಿಕ ಅಗತ್ಯತೆಯನ್ನು ನೀಗಿಸಿಕೊಳ್ಳುವ ನಾಟಕಗಳಿಂದ ಇತರ ಪ್ರಕಾರದ ನಾಟಕಗಳಿಗೆ ಕಂಟಕ ಬಂದೊದಗಿದೆ ಎಂದು ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಹೇಳಿದರು.
ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಮೂರು ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗ ಸಂಭ್ರಮ-2016 ಹಾಗೂ 39ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಜಾತಿ ಸಂಘಟನೆಗಳಿಗೆ ದೊರೆಯುವಷ್ಟು ಬೆಂಬಲ ಕಲಾ ಸಂಘಟಕರಿಗೆ ದೊರೆಯುತ್ತಿಲ್ಲ. ಆದಾಗ್ಯೂ ಎಲ್ಲಾ ಏಳುಬೀಳುಗಳ ನಡುವೆ ಉತ್ಕೃಷ್ಟವಾದ ನಾಟಕಗಳನ್ನು ನೀಡುತ್ತಾ, ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿರುವುದು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ
ಲಾವಣ್ಯ ಬೈಂದೂರು ಮಾಜಿ ಅಧ್ಯಕ್ಷ ಗಣಪತಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಲಾವಣ್ಯದ ಸ್ಥಾಪಕ ಸದಸ್ಯ ಬಿ. ಉಮೇಶ್ ಕುಮಾರ್, ಲಾವಣ್ಯ ಅಧ್ಯಕ್ಷ ಬಿ. ರಾಮ ಟೈಲರ್ ಉಪಸ್ಥಿತರಿದ್ದರು. ಹಿರಿಯ ರಂಗ ಕಲಾವಿದ ವಿ.ಎಚ್. ನಾಯಕ್ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯದ ಕೋಶಾಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿದರು. ಲಾವಣ್ಯದ ಕಾರ್ಯದರ್ಶಿ ನರಸಿಂಹ ಬಿ. ನಾಯಕ್ ವಾರ್ಷಿಕ ವರದಿ ವಾಚಿಸಿದರು. ಸೂರಜ್ ನಾಯಕ್ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಕಾರ‍್ಯಕಾರಿ ಸದಸ್ಯ ಎಚ್. ಉದಯ ಆಚಾರ್ ಧನ್ಯವಾದಗೈದರು. ಸದಾಶಿವ ಡಿ. ಕಾರ್ಯಕ್ರಮ ನಿರೂಪಿಸಿದರು. ಲಾವಣ್ಯ ಬೈಂದೂರು ಕಲಾವಿದರಿಂದ ಗಿರೀಶ್ ಬೈಂದೂರು ನಿರ್ದೇಶನದ ಗಾಂಧಿಗೆ ಸಾವಿಲ್ಲ ನಾಟಕ ಪ್ರದರ್ಶನಗೊಂಡಿತು.