Kundapra.com ಕುಂದಾಪ್ರ ಡಾಟ್ ಕಾಂ

ಭಾಗವತ ಪಟ್ಲ ಸತೀಶ ಶೆಟ್ಟಿ, ರಾಘವೇಂದ್ರ ಆಚಾರ್ಯ ಜನ್ಸಾಲೆ , ಉಮೇಶ ಸುವರ್ಣ ಗೋಪಾಡಿಗೆ ಸನ್ಮಾನ

ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಅಶಕ್ತರಿಗೆ ಸಹಾಯಧನ ಮತ್ತು ವಿದ್ಯಾರ್ಥಿ ವೇತನದ ಸಲುವಾಗಿ ಆರ್.ಬಿ.ಬಗ್ವಾಡಿ ಇವರ ಸಂಯೋಜನೆಯಲ್ಲಿ ಬಗ್ವಾಡಿಯ ಮಹಿಷಾಸುರಮರ್ದಿನಿ ಸಭಾ ಭವನದಲ್ಲಿ ಆಯೋಜಿಸಲಾದ ತೆಂಕು-ಬಡಗಿನ ಹೆಸರಾಂತ ಯಕ್ಷಗಾನ ಕಲಾವಿದರ ಸಮ್ಮೀಲನ ’ಯಕ್ಷ ಸಂಭ್ರಮ’ದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ, ಬಡಗುತಿಟ್ಟಿನ ಯಕ್ಷರಂಗದಲ್ಲಿ 25 ವಸಂತ ಪೂರೈಸಿದ ಭಾಗವತ ಉಮೇಶ ಸುವರ್ಣ ಗೋಪಾಡಿ, ಯುವ ಪ್ರತಿಭಾನ್ವಿತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ ಪುತ್ರನ್, ಯಕ್ಷಗಾನ ಬದುಕಿಗೆ ಸಂಸ್ಕಾರವನ್ನು ನೀಡುವ ಕಲೆ. ಮನೋಲ್ಲಾಸದ ಜೊತೆ ಪೌರಾಣಿಕ ಕಥೆಗಳನ್ನು ಪರಿಣಾಮಕಾರಿಯಾಗಿ ತಿಳಿಯಪಡಿಸುತ್ತದೆ. ಮಹಾಭಾರತ, ರಾಮಾಯಣದ ಮೌಲ್ಯಗಳು ಯಕ್ಷಗಾನದ ಮೂಲಕ ಹೆಚ್ಚು ಪ್ರಸಾರಗೊಂಡಿವೆ. ಯಕ್ಷಗಾನದ ಬಗ್ಗೆ ಇಂದಿನ ಮಕ್ಕಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಗೋಪಾಲ ಪೂಜಾರಿ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ ಕಾಂಚನ್, ನಿಕಟಪೂರ್ವ ಅಧ್ಯಕ್ಷ ಸದಾನಂದ ಬಳ್ಕೂರು, ಜಯ ಸಿ.ಕೋಟ್ಯಾನ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ ಚಾತ್ರಬೆಟ್ಟು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಎಂ.ಎಂ.ಸುವರ್ಣ, ಶ್ರೀಗುರು ಪಬ್ಲಿಕ್ ಸ್ಕೂಲ್‌ನ ಮುಖ್ಯಸ್ಥರಾದ ಬಾಬು ರಾವ್, ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ, ಉದ್ಯಮಿ ಕೆ.ಕೆ.ಕಾಂಚನ್, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಸ್ಥಾಪಕಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆಯ ರಾಜು ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಗವತ ಪಟ್ಲ ಸತೀಶ ಶೆಟ್ಟಿ, ಯಕ್ಷಗಾನ ಕಲೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಸ್ಪಂದಿಸುವುದು ಶ್ಲಾಘನಾರ್ಹ ಕಾರ್ಯ. ಯಕ್ಷಗಾನ ಕಲೆಗೆ ಉತ್ತಮ ಪ್ರೇಕ್ಷಕರಿದ್ದಾರೆ ಎನ್ನುವುದು ಇಲ್ಲಿ ಸಾಭೀತಾಗುತ್ತಿದೆ. ಕಲೆಗೆ ಪ್ರೋತ್ಸಾಹ ಹೀಗೆ ಮುಂದುವರಿಯಲಿ ಎಂದರು.

ಇನ್ನೊರ್ವ ಸನ್ಮಾನಿತರಾದ ಉಮೇಶ ಸುವರ್ಣರು ಮಾತನಾಡಿ, ಕಲಾವಿದರು ಟೀಕೆ ಮತ್ತು ಟಿಪ್ಪಣಿಗಳನ್ನು ಸಮಾನವಾಗಿ ಸ್ವೀಕರಿಸಿದಾಗಲೇ ಬೆಳವಣಿಗೆ ಹೊಂದಲು ಸಾಧ್ಯ. ಕಲಾಭಿಮಾನಿಗಳ ಪ್ರೋತ್ಸಾಹದಿಂದ ನಾನಿವತ್ತು ಯಕ್ಷಗಾನ ಮತ್ತು ಗೊಂಬೆಯಾಟ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಕಲೆ ಹಾಗೂ ಕಲಾವಿದರನ್ನು ಗುರುತಿಸುವ ಪ್ರಕ್ರಿಯೆ ಶ್ಲಾಘನಾರ್ಹವಾದುದು ಎಂದರು.

ಉಪನ್ಯಾಸ ಮಂಜುನಾಥ ಚಂದನ್ ನೆಂಪು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಯಕ್ಷ ಸಂಭ್ರಮದ ಅಂಗವಾಗಿ ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ’ಸುದರ್ಶನ ಗರ್ವಭಂಗ’, ರಾಘವೇಂದ್ರ ಆಚಾರ್ಯ ಜನ್ಸಾಲೆ ಸಾರಥ್ಯದಲ್ಲಿ ’ಶ್ರೀರಾಮ ಪಟ್ಟಾಭಿಷೇಕ’ ಪ್ರಸಂಗ ಪ್ರದರ್ಶನಗೊಂಡಿತು. ಉಭಯ ತಿಟ್ಟುಗಳ ಹೆಸರಾಂತ ಕಲಾವಿದರುಗಳು ಭಾಗವಹಿಸಿದ್ದರು. ಮೊಗವೀರ ಯುವ ಸಂಘಟನೆಯ ನೇತೃತ್ವದಲ್ಲಿ ನಡೆದ ಯಕ್ಷ ಸಂಭ್ರಮಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಪ್ರೇಕ್ಷಕರಿಂದ ಸಭಾಭವನ ಕಿಕ್ಕಿರಿದು ತುಂಬಿತ್ತು.

Exit mobile version