ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರಿ ಶಾಲೆಯ ಕಟ್ಟಡವನ್ನು ಪರವಾನಿಗೆ ಇಲ್ಲದೇ ಖಾಸಗಿ ಕಾರ್ಯಕ್ರಮಗಳಿಗೆ ನೀಡುವುದಿಲ್ಲ ಎಂದಿದ್ದ ಶಾಲೆಯ ಮುಖ್ಯೋಪಧ್ಯಾಯ ಪದ್ಮನಾಭ ಅಡಿಗ ಅವರನ್ನು ಗುರಿಯಾಗಿಸಿಕೊಂಡು ವಾಣಿಶ್ರೀ ಹೆಬ್ಬಾರ್, ಅನುಪ್ ಕುಮಾರ್, ರಾಜೇಶ್ ಆಚಾರ್ಯ ಹಾಗೂ ಗಿರೀಶ್ ಎಂಬುವವರು ಗ್ರಾಪಂ ಸಾಮಾನ್ಯ ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಆ ಬಳಿಕ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಶಾಲೆ ಬೀಗ ಹಾಕುವುದಲ್ಲದೇ, ಹಲ್ಲೆ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಶನಿವಾರ ನಡೆದ ಬೀಜಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಹಾಜರಾಗಿದ್ದ ಬೀಜಾಡಿ ಮೂಡುವಿನ ಸ.ಹಿ.ಪ್ರಾ ಶಾಲೆಯ ಮುಖ್ಯೋಪಧ್ಯಾಯರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿರುವುದನ್ನು ಖಂಡಿಸಿ ದೂರು ದಾಖಲಿಸಿದ್ದಾರೆ.
ಘಟನೆಯ ಬಗ್ಗೆ ಮುಖ್ಯೋಪಧ್ಯಾಯ ಪದ್ಮನಾಭ ಅಡಿಗ ಪ್ರತಿಕ್ರಿಯಿಸಿ ಇಲಾಖೆಯ ನಿಯಮದಂತೆ ಡಿಸೆಂಬರ್ ಬಳಿಕ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಶಾಲೆಯನ್ನು ಬಿಟ್ಟುಕೊಡುವಂತಿಲ್ಲ. ಕಳೆದ ಭಾರಿ ಬಿಟ್ಟುಕೊಟ್ಟಾಗಲೂ ಮಲಿನಗೊಂಡಿದ್ದ ಶಾಲೆಯ ಪರಿಸರವನ್ನು ಸಂಸ್ಥೆಯವರು ಮಾಡದಿದ್ದದ್ದರಿಂದ ಶಾಲಾ ಮಕ್ಕಳು ಸ್ವಚ್ಚಗೊಳಿಸಿದ್ದರು. ಹಾಗಾಗಿ ಈ ಭಾರಿ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವಂತೆ ಖಾಸಗಿ ಸಂಸ್ಥೆಯವರಲ್ಲಿ ತಿಳಿಸಿದ್ದೆವು. ಆದನ್ನೇ ಮುಂದಿಟ್ಟುಕೊಂಡು ಕಿರುಕುಳ ನೀಡುತ್ತಿರುವುದಲ್ಲದೇ, ಜೀವ ಬೆದರಿಕೆ ಒಡ್ಡಿರುವುದು ಆತಂಕಕ್ಕೀಡು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಸದಾರಾಮ ಶೆಟ್ಟಿ ಪ್ರತಿಕ್ರಿಯಿಸಿ ಮುಖ್ಯಶಿಕ್ಷಕರನ್ನು ಸಾರ್ವಜನಿಕವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿರುವುದು ಆಂತಕಕಾರಿ. ಈ ಘಟನೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಲವಾಗಿ ಖಂಡಿಸುತ್ತದೆ ಮತ್ತು ಮುಖ್ಯೋಪಧ್ಯಾಯ ಬೆಂಬಲಕ್ಕೆ ನಿಲ್ಲುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಭಟ್, ಪೋಷಕರು ಹಾಗೂ ಗ್ರಾಮಸ್ಥರಾದ ಶಂಕರ ಶೆಟ್ಟಿ, ಸಂತೋಷ್, ಸದಾನಂದ, ನಾಗರಾಜ ಶೆಟ್ಟಿ, ರಾಘವೇಂದ್ರ ಅಮೀನ್, ಪ್ರಕಾಶ್ ತೋಳಾರ್, ಯಶೋದಾ, ಶೋಭಾ, ನಾಗರಾಜ ಗಾಣಿಗ, ಗಿರೀಶ್ ಉಪಸ್ಥಿತರಿದ್ದರು.