ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರದ್ದುಗೊಂಡಿರುವ ಬಿಪಿಎಲ್ ಕಾರ್ಡ್ ಸಮಸ್ಯೆ, ಸರಕಾರಿ ಭೂಮಿ, ಕೆರೆ ಅತಿಕ್ರಮಣ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಅನಿಯಮಿತ ವಿದ್ಯುತ್ ಕಡಿತ, ಪ್ರಮುಖ ಚರಂಡಿಗಳ ಅತಿಕ್ರಮಣ ತೆರವುಗೊಳಿಸದಿರುವುದು ಮತ್ತು ಹೂಳೆತ್ತದಿರುವುದು, ಗ್ರಾಮ ಪಂಚಾಯತ್ ಕ್ರಿಯಾ ಯೋಜನೆ ಮಾಡದಿರುವುದು ಮೊದಲಾದ ಗಂಭೀರ ಸಮಸ್ಯೆಗಳು ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ದ್ವಿತೀಯ ಗ್ರಾಮಸಭೆಯಲ್ಲಿ ಪ್ರಸ್ತಾಪಗೊಂಡಿತು.
ಸರಕಾರದ ತಪ್ಪು ನಿರ್ಧಾರದಿಂದ ಬಡವರ ನೂರಾರು ಬಿಪಿಎಲ್ ಕಾರ್ಡ್ ರದ್ದುಗೊಂಡಿದ್ದು, ಸರಕಾರ ಈ ವಿಚಾರದಲ್ಲಿ ನಿಯಮಗಳನ್ನು ಸಡಿಲಿಸಿ ಬಡವರಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಗಂಗೊಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ತ್ಯಾಜ್ಯ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸರಕಾರವಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಸ್ಥಳವನ್ನು ಗುರುತಿಸಿ ನೀಡಿಲ್ಲ ಅಲ್ಲದೆ ತ್ಯಾಜ್ಯ ವಿಲೇವಾರಿಗೆ ಗಂಭೀರ ಸಮಸ್ಯೆ ಇಲ್ಲದ ಗ್ರಾಮಗಳಿಗೆ ಸರಕಾರ 20 ಲಕ್ಷ ಅನುದಾನ ನೀಡಿದ್ದು, ಗಂಗೊಳ್ಳಿಗೆ ಅನುದಾನ ನೀಡದೆ ತಾರತಮ್ಯ ಮಾಡಿದೆ ಎಂದು ನಾಗರಿಕರು ಆರೋಪಿಸಿದರು.
ಗಂಗೊಳ್ಳಿಯಲ್ಲಿ ಸರಕಾರಿ ಜಾಗವನ್ನು ಗುರುತಿಸಿವಂತೆ ಹಾಗೂ ಅತಿಕ್ರಮಣಗೊಂಡಿರುವ ಸರಕಾರಿ ಸ್ಥಳವನ್ನು ಗುರುತಿಸಿ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕಳೆದ ಅನೇಕ ಗ್ರಾಮಸಭೆಗಳಲ್ಲಿ ಒತ್ತಾಯ ಮಾಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸದಿರುವ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ನೀಡಲು ಕೂಡಲೇ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸಭಾ ಸದಸ್ಯರು ಆಗ್ರಹಿಸಿದರು.
ಗಂಗೊಳ್ಳಿಯಲ್ಲಿ ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿರುವ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ವಿದ್ಯುತ್ ಕಡಿತವನ್ನು ನಿಲ್ಲಿಸುವಂತೆ ಮತ್ತು ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೆಸ್ಕಾಂ ಗಂಗೊಳ್ಳಿ ಸಬ್‌ಸ್ಟೇಶನ್ ಕೂಡಲೇ ಕಾರ್ಯಾರಂಭ ಮಾಡಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಮಾರ್ಚ್ ತಿಂಗಳು ಅಂತ್ಯವಾಗುತ್ತಾ ಬಂದರೂ ಗ್ರಾಮ ಪಂಚಾಯತ್ 14ನೇ ಹಣಕಾಸು ಕ್ರಿಯಾ ಯೋಜನೆ ಮಾಡದಿರುವುದು ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಕೆಲ ಗ್ರಾಪಂ ಸದಸ್ಯರು ಕ್ರಿಯಾ ಯೋಜನೆ ಮಾಡಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ವಿಚಾರ ನಾಗರಿಕರನ್ನು ಕೆರಳಿಸಿತು. ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ ಕ್ರಿಯಾ ಯೋಜನೆಗಳನ್ನು ಮಾಡಿ ಅಭಿವೃದ್ಧಿ ಕಾರ್ಯ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಗಂಗೊಳ್ಳಿಗೆ ಮಂಜೂರಾದ ೧೦೮ ಅಂಬುಲೆನ್ಸ್ ಉದ್ಘಾಟನೆಗೆ ಗ್ರಾಪಂ ಅಧ್ಯಕ್ಷರನ್ನು ಆಹ್ವಾನಿಸದಿರುವುದಕ್ಕೆ ಸಭೆಯಲ್ಲಿ ಆಕ್ಷೇಪ ಕೇಳಿ ಬಂದಿತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರತೆ ಇರುವ ಸಿಬ್ಬಂದಿಗಳು ಹಾಗೂ ವೈದ್ಯಾಧಿಕಾರಿಗಳ ನೇಮಕ ಮಾಡಬೇಕು, ನಾದುರಸ್ಥಿಯಲ್ಲಿರುವ ಗಂಗೊಳ್ಳಿಯ ಕೆಎಫ್‌ಡಿಸಿ ಹಳೆ ಕಟ್ಟಡವನ್ನು ನೆಲಸಮಗೊಳಿಸಬೇಕು, ಗಂಗೊಳ್ಳಿ ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣ ಮಾಡಲು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಬೇಕು, ಗಂಗೊಳ್ಳಿ ಗ್ರಾಪಂನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ರಾಜೇಶ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಪಂ ಉಪಾಧ್ಯಕ್ಷ ಮಹೇಶರಾಜ್ ಪೂಜಾರಿ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಸೈ ವೆಂಕಟೇಶ ಗೊಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ, ಗಂಗೊಳ್ಳಿ ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ, ಮೆಸ್ಕಾಂ ಗಂಗೊಳ್ಳಿ ಶಾಖಾಧಿಕಾರಿ ರಾಘವೇಂದ್ರ, ಪಶುವೈದ್ಯ ಇಲಾಖೆಯ ರಾಘವೇಂದ್ರ ಶೆಟ್ಟಿ, ಮೀನುಗಾರಿಕಾ ಇಲಾಖೆಯ ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ, ನಮ್ಮ ಭೂಮಿ ಸಂಸ್ಥೆಯ ಶಾರದಾ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ ಡಿಸೋಜ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ದಿನೇಶ ಶೇರುಗಾರ್ ವರದಿ ವಾಚಿಸಿದರು.