Kundapra.com ಕುಂದಾಪ್ರ ಡಾಟ್ ಕಾಂ

ಸೋರಿಕೆಯಾಗುತ್ತಿರುವುದು ಪ್ರಶ್ನೆಪತ್ರಿಕೆಗಳಲ್ಲ. ಸರಕಾರದ ಹುಳುಕುಗಳು

ದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗುವುದರ ಮುಖೇನ ಪಿಯುಸಿ ಇಲಾಖೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಹೂರಣ ಮತ್ತೆ ಬಟಾಬಯಲಾಗಿದೆ. ಅಸಲಿಗೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲೇನಲ್ಲ.ಕಳೆದ ಹಲವಾರು ವರುಷಗಳಿಂದ ಪ್ರತೀ ಬಾರಿ ಕೂಡ ದ್ವಿತೀಯ ಪಿಯುಸಿ ಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳು ಬಯಲಾಗುವುದು ಪರೀಕ್ಷಾ ಮಂಡಳಿ ಅದನ್ನು ಅಲ್ಲಗಳೆಯುವುದು ನಡೆದೇ ಇದೆ. ಆಗೊಮ್ಮೆ ಈಗೊಮ್ಮೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪರೀಕ್ಷೆಯನ್ನು ರದ್ದು ಮಾಡಿ ಮರುಪರೀಕ್ಷೆ ಮಾಡಿದ ಸಂದರ್ಭಗಳು ಬಹಳಷ್ಟು ನಡೆದಿವೆ. ಈ ಬಾರಿ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಕೂಡ ಲೀಕ್ ಆಗಿರುವುದು ಪಿಯುಸಿ ಮಂಡಳಿಯಲ್ಲಿ ಏನೊಂದೂ ಸರಿ ಇದ್ದ ಹಾಗೆ ಕಾಣುವುದಿಲ್ಲ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ.

ಪ್ರಾಯಶಃ ಅವತ್ತು ವಿದ್ಯಾರ್ಥಿಯೊಬ್ಬ ನಿರ್ದೇಶಕರಿಗೆ ನೇರವಾಗಿ ಪ್ರಶ್ನೆಪತ್ರಿಕೆಯನ್ನು ನೀಡಿರದಿದ್ದರೆ ರಸಾಯನಶಾಸ್ತ್ರ ಪರೀಕ್ಷೆಯೂ ಸಾಂಗವಾಗಿ ನಡೆದುಬಿಡುತಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈ ಹಿಂದೆಯೂ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಗೊತ್ತಿದ್ದೂ ಸಾಕ್ಷ್ಯಗಳು ಲಭ್ಯವಿದ್ದು ಪರೀಕ್ಷೆಗಳು ಮಾಮೂಲಿನಂತೆ ನಡೆದ ಉದಾಹರಣೆಗಳಿವೆ.ಉತ್ತಮ ವಿದ್ಯಾರ್ಥಿಗಳಿಗಾದ ಅನ್ಯಾಯವನ್ನು ಕೇಳುವವರೇ ಇರಲಿಲ್ಲ. ಈಗಲೂ ಇದ್ದಾರೆಂದು ಅನ್ನಿಸುತ್ತಿಲ್ಲ.ಎಲ್ಲಾ ಮುಗಿದ ಮೇಲೆ ಸೋರಿಕೆ ಆಗಿತ್ತಲ್ಲ ಎಂದು ಯಾರಾದರು ಪ್ರಶ್ನಿಸಿದರೆ ಅಧಿಕಾರಿಗಳಿಂದ ಮತ್ತದೇ ಸಿದ್ಧ ಉತ್ತರಗಳು ಸಿಗುತಿತ್ತು. ಸೋರಿಕೆ ಆಗಿಲ್ಲ. ತಾಳೆಯಾಗುತ್ತಿಲ್ಲ. ನಮಗಿನ್ನೂ ಮಾಹಿತಿ ಬಂದಿಲ್ಲ ಅಥವಾ ಸಿಐಡಿ ತನಿಖೆ ಮಾಡುತ್ತೀವಿ ಮತ್ತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೀವಿ. ಎಷ್ಟು ಅಂತ ಕೇಳುತ್ತೀರಿ…ಅದದೇ ಮಾತುಗಳನ್ನು . ಆ ಚೆಂದಕ್ಕೆ ಅವರನ್ನು ಪ್ರಶ್ನಿಸಬೇಕಾ? ಕುಂದಾಪ್ರ ಡಾಟ್ ಕಾಂ

ಈ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳನ್ನು ನೋಡೋಣ.

ಈ ಬಾರಿ ಜೀವ ಶಾಸ್ತ್ರ, ಗಣಿತಶಾಸ್ತ್ರ ಸೇರಿದಂತೆ ಇನ್ನಿತರ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಹೇಳಲಾಗುತ್ತಿದೆ. ಕೇವಲ ಪಟ್ಟಣದ ಮಕ್ಕಳಲ್ಲದೆ ತೀರಾ ಗ್ರಾಮೀಣ ಮಟ್ಟದ ಸಿರಿವಂತ ಮಕ್ಕಳುಗಳು ಅದರ ಪ್ರಯೋಜನ ಪಡೆದಿದ್ದಾರೆ ಎನ್ನಲಾಗುತ್ತಿದೆ.ಅದು ಊಹಾಪೋಹಗಳಿರಬಹುದು ಅಥವಾ ನೈಜ ವಿಚಾರಗಳಿರಬಹುದು. ಪಿಯು ಮಂಡಲಿ ಅಥವಾ ಶಿಕ್ಷಣ ಸಚಿವರು ಈ ಬಗೆಗೆ ಯಾಕೆ ಮಾತನಾಡುತ್ತಿಲ್ಲ.

ಸೋರಿಕೆಯಾಗ ಬಹುದೆನ್ನುವ ವಿಚಾರ ತಿಳಿದಿದ್ದೂ ಭದ್ರತೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇವರೇಕೆ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಎರಡನೇ ಬಾರಿ ಸೋರಿಕೆಯಾದ ನಂತರ ವರುಷದ ಹಿಂದೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳನ್ನು ಸಿಐಡಿ ಪೋಲಿಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರಂತೆ. ಹಾಗಾದರೆ ಇಷ್ಟು ದಿನ ಸಿಐಡಿ ತನಿಖೆಯ ನೆಪದಲ್ಲಿ ಮಾಡಿದ್ದೇನು? ಈ ಹಿಂದೆ ಸಿಕ್ಕಿಬಿದ್ದವರು ಮತ್ತೆ ಅಂತಹುದೇ ಪ್ರಕರಣದಲ್ಲಿ ಸಿಕ್ಕಿಬೀಳುತ್ತಾರೆಂದರೆ ಅವರಿಗೆ ನಮ್ಮ ಕಾನೂನಿನ ಭಯ ಕಿಂಚಿತ್ತೂ ಇಲ್ಲವೆಂದರ್ಥ.ಈ ಹಿಂದೆ ಸಿಕ್ಕಿಬಿದ್ದಾಗ ಕಠಿಣ ಶಿಕ್ಷೆಯನ್ನು ನೀಡಿರುತ್ತಿದ್ದರೆ ಅವರು ಮತ್ತೆ ಮತ್ತೆ ಆ ತಪ್ಪುಗಳನ್ನು ಖಂಡಿತಾ ಮಾಡುತ್ತಿರಲಿಲ್ಲ. ಆದರೆ ನಮ್ಮಲ್ಲಿ ತನಿಖೆಯ ನೆಪದಲ್ಲಿ ಒಂದಷ್ಟು ಜನರನ್ನು ಬಂಧಿಸುವುದು ಜನ ಮರೆತ ಮೇಲೆ ಅವರನ್ನು ಹೊರಗಡೆ ಬಿಡುವುದು ಇಷ್ಟೇ ಆಗುತ್ತಿರುವುದು ಬಿಟ್ಟರೆ ಬೇರೇನೂ ಆಗುತ್ತಿಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ ಪ್ರತೀ ಬಾರೀ ಪರೀಕ್ಷೆಯ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿಗಳು ಕೈ ಬದಲಾಯಿಸುತ್ತವೆ. ಮತ್ತು ಆಯಕಟ್ಟಿನ ಅಧಿಕಾರಿಗಳಿಗೆ ಅದರ ಪಾಲು ಸಲ್ಲುತ್ತಿರುವುದು ಸತ್ಯ ಎಂದು ಎಂತವರಿಗಾದರೂ ಅನ್ನಿಸದಿರದು.

ಕನ್ನಡ ವಾಹಿನಿಯೊಂದು ಪಿಯು ಇಲಾಖೆಯಲ್ಲಿ ಹಲವಾರು ವರುಷಗಳಿಂದ ಕೆಲಸ ಮಾಡಿಕೊಂಡಿರುವ ಸುರೇಶ ಎನ್ನುವ ವ್ಯಕ್ತಿಯೊಬ್ಬರನ್ನು ಈ ಸೋರಿಕೆಯ ಹಿಂದಿನ ದೊಡ್ಡ ಸೂತ್ರಧಾರ ಎನ್ನುವ ನೆಲೆಯಲ್ಲಿ ಪದೇ ಪದೇ ವರದಿ ಬಿತ್ತರಿಸುತ್ತಿದ್ದರೂ ಸಿಐಡಿ ಅವರನ್ನು ಕನಿಷ್ಠ ವಿಚಾರಣೆ ಕೂಡ ಮಾಡದೆ ಸುಮ್ಮನೆ ಕುಳಿತಿದ್ದೇಕೆ? ಕುಂದಾಪ್ರ ಡಾಟ್ ಕಾಂ

ಈ ಹಿಂದೆ ಪರೀಕ್ಷೆಗಳು ಹತ್ತಿರವಾದಾಗ ಸೋರಿಕೆಗೆ ಸಂಬಂಧಪಟ್ಟ ನಾಲೈದು ಜಾಲಗಳ ಮೇಲೆ ಕಣ್ಣಿಡಿ ಅಥವಾ ಅವರನ್ನು ಬಂಧನದಲ್ಲಿರಿಸಿಕೊಳ್ಳಿ ಎನ್ನುವ ಅತ್ಯಮೂಲ್ಯ ಸಲಹೆಯನ್ನು ಪಿಯು ಇಲಾಖೆಯಾಗಲಿ ಶಿಕ್ಷಣ ಸಚಿವರಾಗಲಿ ನಿರ್ಲಕ್ಷ್ಯ ಮಾಡಿದ್ದರ ಹಿಂದಿನ ಹಕೀಕತ್ತು ಏನಿರಬಹುದು?

ಎರಡನೇ ಬಾರಿ ಸೋರಿಕೆಯ ಬಳಿಕ ಪಿಯು ಇಲಾಖೆಯ ನಲವತ್ತು ಜನರನ್ನು ಅಮಾನತ್ತು ಮಾಡಿದ್ದೀರಲ್ಲ.ಈ ಕೆಲಸವನ್ನು ಪ್ರಥಮ ಬಾರಿ ಸೋರಿಕೆಯಾದಾಗಲೇ ಮಾಡಬಹುದಿತ್ತಲ್ಲ.ಅಷ್ಟಕ್ಕೂ ಪ್ರಶ್ನೆ ಪತ್ರಿಕೆ ರಚನೆಗೆ ಸಂಬಂಧಪಡದೇ ಇರುವವರನ್ನು ಕೂಡ ಸೇರಿಸಿ ಅಮಾನತ್ತು ಮಾಡಿದ್ದೀರಲ್ಲಾ. ಯಾವ ಆಧಾರದ ಮೇಲೆ ಹಾಗೆ ಮಾಡಿದಿರಿ? ನೈತಿಕತೆ ಹೊಣೆಗಾರಿಕೆ ಅನ್ನೋದು ಕೇವಲ ಪಿಯು ಇಲಾಖೆಗೆ ಮಾತ್ರ ಸಂಭಂದಿಸಿದ್ದಲ್ಲ ಅಲ್ಲವೆ? ಶಿಕ್ಷಣ ಸಚಿವರು ಕೂಡ ಇಂತಹ ಅವ್ಯವಸ್ಥೆಗೆ ಪರೋಕ್ಷವಾಗಿಯಾದರೂ ಕಾರಣರೇ ಅಲ್ಲವೆ? ಕುಂದಾಪ್ರ ಡಾಟ್ ಕಾಂ

ಇನ್ನೇನು ಪಿಯು ಪರೀಕ್ಷೆಗೆ ಕೆಲವೇ ದಿನಗಳಿವೆ ಎನ್ನುವಾಗ ಪಿಯು ಇಲಾಖೆಯ ನಿರ್ದೇಶಕರನ್ನೇ ಬದಲಾಯಿಸುವಂತಹ ಅತ್ಯಂತ ಮೂರ್ಖತನದ ನಿರ್ಧಾರ ಮಾಡುವವರಿಗೆ ತಲೆಯಲ್ಲಿ ವಿವೇಚನೆ ಅನ್ನೋದು ಇರಲು ಸಾಧ್ಯವೆ? ಲಕ್ಷಾಂತರ ವಿದ್ಯಾಥಿಗಳ ಭವಿಷ್ಯತ್ತನ್ನು ನಿರ್ಧರಿಸಬಲ್ಲ ಪಿಯುಸಿ ಪರೀಕ್ಷೆಯನ್ನು ಅಷ್ಟು ಕೀಳಂದಾಜಿಸುವವರ ಮನಸ್ಥಿತಿ ಲಾಭಬಡುಕತನದ್ದಾ ಅಥವಾ ಅಯೋಗ್ಯತನದ್ದಾ?
ಪಲ್ಲವಿ ಅಕುರಾತಿ ದಕ್ಷ ಸೇವೆಗೆ ಹೆಸರು ಮಾಡಿರುವುದು ನಿಜ.ಆದರೆ ಹೊಸ ವ್ಯವಸ್ಥೆಯೊಳಕ್ಕೆ ಕೊನೆಯ ಕ್ಷಣದಲ್ಲಿ ಪ್ರವೇಶಿಸಿ ಎಲ್ಲವನ್ನೂ ಶೀಘ್ರವಾಗಿ ಸಗುಮವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳಲು ಎಂತಹ ದಕ್ಷ ಆಧಿಕಾರಿಗೂ ಅಸಾಧ್ಯದ ಮಾತು. ಹಾಗಿರುವಾಗ ಇಲ್ಲಿ ಪಲ್ಲವಿಯವರನ್ನು ದೂಷಿಸಿ ಪ್ರಯೋಜನವಿಲ್ಲ. ಈ ಹಿಂದೆ ಸೋರಿಕೆ ಪ್ರಕರಣದಲ್ಲಿ ಆರೋಪಿಗಳಾಗಿದ್ದವರೆ ಪಿಯು ಇಲಾಖೆಯ ವಿವಿಧ ಹುದ್ದೆಗಳಲ್ಲಿ ಇನ್ನೂ ಕಾರ‍್ಯನಿರ್ವಹಿಸುತ್ತಿದ್ದಾರೆಂದರೆ ಭ್ರಷ್ಟಾಚಾರದ ಬೇರುಗಳನ್ನು ಆಳಕ್ಕೆ ಇಳಿಯಲು ಅನುವು ಮಾಡಿಕೊಟ್ಟದ್ದು ಯಾರು? ಕುಂದಾಪ್ರ ಡಾಟ್ ಕಾಂ

ಇದೀಗ ಹಿಂದೆ ಕೆಲಸ ನಿರ್ವಹಿಸಿದ್ದ ಕಡೆಯಲ್ಲೆಲ್ಲಾ ದಕ್ಷ ಅಧಿಕಾರಿ ಎಂದು ಹೆಸರು ಮಾಡಿರುವ ಪಲ್ಲವಿ ಅಕುರಾತಿಯನ್ನು ವರ್ಗಾವಣೆಯ ಬಲಿಪಶುಮಾಡಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಇಲಾಖೆಯಿಂದ ಎತ್ತಂಗಡಿ ಮಾಡಿಸುವ ಸಲುವಾಗಿಯೇ ಉದ್ದೇಶಪೂರ್ವಕವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಹಿಂದೆ ರಶ್ಮಿಯವರ ವಿಚಾರದಲ್ಲೂ ಹೀಗೆ ಆಗಿದ್ದನ್ನು ಸ್ಮರಿಸಿಕೊಳ್ಳಬಹುದು. ಅಂದರೆ ಪಿಯು ಇಲಾಖೆಗೆ ದಕ್ಷ ಆಧಿಕಾರಿಗಳು ಬೇಡವಾ? ಈ ನಿಟ್ಟಿನಲ್ಲೂ ತನಿಖೆ ನಡೆಯಬೇಕಲ್ಲವೆ!

ಒಂದಷ್ಟು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕೋಚಿಂಗ್ ಸೆಂಟರ್ ಗಳು ಈ ಪ್ರಕರಣದಲ್ಲಿ ಮುಖ್ಯ ಪಾತ್ರಧಾರಿಗಳು ಅನ್ನುವ ಮಾತಲ್ಲಿ ಖಂಡಿತಾ ಹುರುಳಿದೆ. ಅವುಗಳ ವಿರುದ್ಧವೂ ತನಿಖೆಯಾಗಬೇಕಲ್ಲವೆ?

ವರುಷಗಳಿಂದ ಉಪನ್ಯಾಸಕರು ಒಂದಷ್ಟು ಬೇಡಿಕೆಯೊಂದಿಗೆ ಮೌಲ್ಯಮಾಪನ ಬಹಿಷ್ಕರಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಪ್ರತೀ ವರುಷ ವಿದ್ಯಾರ್ಥಿಗಳು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.ಆದರೆ ಇದಕ್ಕೊಂದು ಸೂಕ್ತ ಪರಿಹಾರ ಮೊದಲೇ ಕಂಡುಕೊಳ್ಳಬೇಕು ಎಂದು ಸಚಿವರಿಗಾಗಲಿ ಮುಖ್ಯಮಂತ್ರಿಗಳಿಗಾಗಲಿ ಅನ್ನಿಸದಿರುವುದು ಸರಕಾರದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ. ಕೊನೆಗಳಿಗೆಯಲ್ಲಿ ಮಾಡಿದ ಸಭೆಯಲ್ಲೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲವೆಂದಾದಲ್ಲಿ ಇದು ಅಸಮರ್ಥತೆಯಲ್ಲದೆ ಮತ್ತೇನು?

ನ್ಯಾಯವೋ ಅನ್ಯಾಯವೋ ಅಷ್ಟೂ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಲೇಬೇಕಿದೆ. ಅವರಿಗಾಗುತ್ತಿರುವ ಮಾನಸಿಕ ತಳಮಳ ನಷ್ಟವನ್ನು ಯಾರೊಬ್ಬರೂ ತುಂಬಿಕೊಡಲು ಸಾಧ್ಯವಿಲ್ಲ. ಇಡೀ ವ್ಯವಸ್ಥೆಯ ವಿರುದ್ಧ ಆಕ್ರೋಶದ ಫಲವಾಗಿ ಪ್ರತಿಭಟನೆ ನಡೆಯುತ್ತಿದೆ.ಕನಿಷ್ಠ ಪಕ್ಷ ಈ ಹಂತದಲ್ಲಿ ಅವರೆದುರಿಗೆ ನಿಂತು ಅವರಲ್ಲಿ ಧೈರ್ಯವನ್ನು ತುಂಬುವ ಕೆಲಸವನ್ನಾದರೂ ಸಂಬಂಧಿತರು ಮಾಡಬೇಕಿತ್ತು. ಅದಾಗುತ್ತಿಲ್ಲವೆನ್ನುವುದು ವಿಷಾದನೀಯ. ಪೋಲಿಸರ ಮೂಲಕವೇ ಎಲ್ಲವನ್ನೂ ನಿಗ್ರಹಿಸಬಲ್ಲೆವೂ ಅನ್ನೋ ಮನೋಧಾರಣೆ ಖಂಡನೀಯ.ನಿರ್ವಹಣೆಗೆ ಬೇಕಾಗಿರುವುದು ಬರಿಯ ಸಜ್ಜನಿಕೆಯಲ್ಲ. ದಕ್ಷತೆ ಬೇಕು. ಭ್ರಷ್ಟರನ್ನು ಹೊರದಬ್ಬುವ ತಾಕತ್ತು ಬೇಕು. ಅದಾಗುವುದಿಲ್ಲ ಎಂದಾದಲ್ಲಿ ಎದ್ದು ಹೊರಬರಬೇಕು. ಅದುಬಿಟ್ಟು ಅವರ ಕಾಲದಲ್ಲೂ ಹೀಗಾಗಿತ್ತು ಅನ್ನೋದು ಚಿಕ್ಕ ಮಕ್ಕಳ ವರಸೆ ಅಷ್ಟೇ. ಅದನ್ನು ಹೇಳೋದಕ್ಕೆ ಪದವಿಗಳ ಹಂಗು ಯಾಕೆ ಬೇಕು ಸ್ವಾಮಿ? ಕನಿಷ್ಠ ಇನ್ನು ಮುಂದಾದರೂ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಸಿಗಲಿ ತಪ್ಪಿತಸ್ಥರಿಗೆ ಕಠಿಣ ಶಕ್ಷೆ ಆಗಲಿ ಅನ್ನೋದು ಆಶಯ. ಕುಂದಾಪ್ರ ಡಾಟ್ ಕಾಂ

ಆದರೆ ಲೋಕಾಯುಕ್ತವನ್ನು ತಿರಸ್ಕರಿಸಿ ತನ್ನ ನಿಯಂತ್ರಣದಲ್ಲಿರುವ ಎಸಿಬಿಯನ್ನು ಸ್ಥಾಪಿಸಿ ಆ ಮೂಲಕ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿರುವ ಕಾಂಗ್ರೆಸ್ ಸರಕಾರದ ಸಿಐಡಿ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನಿಜಕ್ಕೂ ನ್ಯಾಯಸಿಗುತ್ತದೆ ಅನ್ನುವ ಯಾವ ಭರವಸೆಯೂ ಉಳಿದಿಲ್ಲ. ಸದಾಕಾಲ ತಮ್ಮ ತಪ್ಪುಗಳಿಗೆ ಬೇರೆಯವರತ್ತ ಬೆರಳು ತೋರಿಸಿ ನೀವು ತಪ್ಪು ಮಾಡಿಲ್ವಾ ಅನ್ನುವಂತ ಸಚಿವರುಗಳಿಂದ ಅದಿನ್ನೆಂತಹ ಆಡಳಿತವನ್ನು ನಿರೀಕ್ಷಿಸಬಹುದು ? ಕುಂದಾಪ್ರ ಡಾಟ್ ಕಾಂ

ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ, ಕನ್ನಯ್ಯ ಕೂಗಾಡಿದ್ದಕ್ಕೆ ದಬದಬನೆ ಧಾವಿಸಿ ಬಂದಿದ್ದ ರಾಹುಲ್ ಗಾಂಧಿ ಎನ್ನೋ ನಾಯಕನಿಗೆ ಈಗ ಲಕ್ಷಾಂತರ ವಿದ್ಯಾರ್ಥಿಗಳ ಕೂಗು ಕೇಳದೆ ಹೋಗಿದ್ದೇಗೆ?? ಇವರನ್ನೆಲ್ಲಾ ನಾಯಕರೆಂದು ಅದು ಹೇಗೆ ಒಪ್ಪಿಕೊಳ್ಳುತ್ತೀರಿ.ಎಲ್ಲಿ ಹೋದರು ಆ ಸೋಗಲಾಡಿ ಸಾಹಿತಿಗಳು …?ಬನ್ನಿ ಸಾಹಿತಿಗಳೇ ಬನ್ನಿ.ಈಗ ನಿಮ್ಮ ಪ್ರಶಸ್ತಿಗಳನ್ನು ವಾಪಾಸು ಮಾಡಿ ನೋಡೋಣ ನಿಮ್ಮ ಸಮಾಜಿಕ ಕಳಕಳಿ. ಅಸಹಿಷ್ಣುತೆಯ ವಿರುದ್ಧದ ಕಳಕಳಿ. ಅದೆಲ್ಲಿ ಅವಿತಿದ್ದಾರೆ ಬುದ್ಧಿಜೀವಿಗಳು..?ಅವರ ಧ್ವನಿ ಸತ್ತು ಹೋಗಿದೆಯಾ? ಅಥವಾ ಅವರೇ…? ನಿಮ್ಮಲ್ಲಿ ನಾನು ಕೇಳಿಕೊಳ್ಳೋದಿಷ್ಟೆ. ನಿಮ್ಮ ಕೊಳಕು ಸಹಾಯ ವಿದ್ಯಾರ್ಥಿಗಳಿಗೆ ಖಂಡಿತಾ ಬೇಡ. ಆದರೆ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದಕ್ಕೂ ನರೇಂದ್ರ ಮೋದಿಯೇ ಕಾರಣ ಎಂದು ಬಡಬಡಿಸಿಬಿಡಬೇಡಿ. ಆಮೇಲೆ ಜನ ಏನು ಮಾಡುತ್ತಾರೋ… ಯಾವುದರಲ್ಲಿ……..ರೋ ನನಗೆ ಗೊತ್ತಿಲ್ಲ. ನಿಮಗೆ ಇಷ್ಟು ಹೇಳಿದರೆ ಅರ್ಥವಾಗುತ್ತದೆ ಅಂದುಕೊಂಡಿದ್ದೀನಿ.

Exit mobile version