Kundapra.com ಕುಂದಾಪ್ರ ಡಾಟ್ ಕಾಂ

ವಲಸಿಗರಿಂದ ಕರಾವಳಿಯ ಆರ್ಥಿಕತೆಯ ಅಭಿವೃದ್ಧಿ : ಡಾ.ರೇಖಾ ಬನ್ನಾಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹತ್ತೊಂಬತ್ತನೆಯ ಶತಮಾನದ ಕೊನೆಯಭಾಗ ಮತ್ತು ಇಪ್ಪತ್ತನೆಯ ಶತಮಾನದ ಆರಂಭಿಕ ವರ್ಷಗಳಲ್ಲಿ ಕರಾವಳಿಯಲ್ಲಿ ಸಣ್ಣಪುಟ್ಟ ಉದ್ಯಮಗಳು ತಲೆ ಎತ್ತಿದರೂ ಹೆಚ್ಚುತ್ತಿರುವ ಜನಸಂಖ್ಯೆಗೆ ಅದು ತೀರಾ ತೀರಾ ಕಡಿಮೆಯೇ ಆಗಿತ್ತು. ಕೃಷಿಯನ್ನೇ ನೆಚ್ಚಿಕೊಂಡಿರುವ ಜನರ ಕಡುಬಡತನದ, ಕುಲಕಸುಬುಗಳ ಅವಸಾನ ಮತ್ತು ವಿಸ್ತ್ರತಗೊಳ್ಳುತ್ತಿರುವ ಆಸೆಗಳ ವಲಯ ಜನತೆ ನಗರಗಳತ್ತ ಮುಖ ಮಾಡುವಂತೆ ಮಾಡಿತು. ಮುಖ್ಯವಾಗಿ ಆವತ್ತಿನ ಕಾಲದಲ್ಲಿ ಕರಾವಳಿಯ ಬಹುತೇಕ ಜನ ಮುಂಬೈಗೆ ತೆರಳಿದರು. ಲಭ್ಯವಿದ್ದ ಹಡಗು ಹಾಗೂ ಬಸ್ಸಿನ ಸೌಕರ್ಯಗಳು ಇಂತಹ ವಲಸೆಯನ್ನು ಹೆಚ್ಚಿಸಿದೆ. ಹೀಗೆ ವಲಸೆ ಹೋದವರು ಹೋಟೇಲು, ಗಿರಣಿ, ಕಾರ್ಖಾನೆ ಮುಂತಾದೆಡೆ ದುಡಿಯುತ್ತಾ ರಾತ್ರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರೇಖಾ ಬನ್ನಾಡಿ ಹೇಳಿದರು.

ಅವ್ರು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ರಾತ್ರಿ ಶಾಲೆ ಕಲಿತು ಶಿಕ್ಷಣ ಗಳಿಸಿದ ವಲಸಿಗರು ಅತ್ಯಂತ ಪರಿಶ್ರಮದಿಂದ ತಮ್ಮ ಉದ್ಯೋಗ ಮತ್ತು ಉದ್ಯಮಗಳನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಅಭಿವೃದ್ಧಿ ಸಾಧಿಸಿದರು. ಹೀಗೆ ಪರ ಊರುಗಳಿಗೆ ತೆರಳಿ ಅಲ್ಲಿ ಗಳಿಸಿದ ಹಣವನ್ನು ಊರು ಮನೆಗೆ ಕಳುಹಿಸುವ ಮೂಲಕ ಕರಾವಳಿಯ ಆರ್ಥಿಕ ಅಭಿವೃದ್ಧಿಗೆ ಕಾರಣರಾದರೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಲೇಖಕಿ ಡಾ.ಜ್ಯೋತ್ಸ್ನಾ ಕಾಮತ್ ಡಾ.ರೇಖಾ ಬನ್ನಾಡಿ ಗೌರವಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್. ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಡಾ.ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version