Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲು. ತನಿಕೆ ಹಳ್ಳ ಹಿಡಿಯುತ್ತಿರುವ ಬಗ್ಗೆ ಆಕ್ರೋಶ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಚಿನ್ನಾಭರಣ ಕಳವು ಪ್ರಕರಣ ನಡೆದು ಒಂದು ತಿಂಗಳಾದರೂ ಪ್ರಕರಣದ ಸಮಗ್ರ ತನಿಖೆ ನಡೆದಿಲ್ಲ. ಮಾತ್ರವಲ್ಲದೆ ತನಿಖೆಗಾಗಿ ರಚಿಸಲಾಗಿರುವ ಸಮಿತಿಯಲ್ಲಿರುವ ಓರ್ವ ಅಧಿಕಾರಿಯ ಮೇಲೆಯೇ ಆರೋಪಗಳಿವೆ ಎಂದು ದೇಗುಲದ ಮಾಜಿ ಧರ್ಮದರ್ಶಿ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಹೇಳಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ದೇಗುಲದ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಆದರೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಸ್‌ಪಿ ಅಣ್ಣಾಮಲೈ ಮೇಲೆ ಕಾಣದ ಕೈಗಳ ಒತ್ತಡ ಇರುವ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಪ್ರಕರಣದ ತನಿಖೆಗಾಗಿ ನೇಮಿಸಲಾಗಿರುವ ನಾಲ್ವರು ಅಧಿಕಾರಿಗಳನ್ನೊಳಗೊಂಡ ಸಮಿತಿಯಲ್ಲಿ ಓರ್ವರು ಈ ಹಿಂದೆ ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಅವರ ಮೇಲೆಯೂ ಆಪಾದನೆಗಳಿವೆ. ಹಾಗಾಗಿ ಅವರನ್ನು ಸಮಿತಿಯಿಂದ ಕೈಬಿಡಬೇಕು ಎಂದರು.

ನಕಲಿ ಆಭರಣಗಳು ಇನ್ನೂ ದೇಗುಲದ ಕಪಾಟಿನಲ್ಲಿವೆ. ಹಾಗಾದರೆ ಅಸಲಿ ಆಭರಣಗಳು ಎಲ್ಲಿ ಹೋದವು ಎಂಬುದನ್ನು ಕೂಡ ಪತ್ತೆ ಹಚ್ಚಬೇಕಾಗಿದೆ. ಕಳೆದ 8 ವರ್ಷಗಳಿಂದ ದೇಗುಲದ ಲೆಕ್ಕಪರಿಶೋಧನೆ ಕೂಡ ನಡೆದಿಲ್ಲ. ಆರಂಭದಲ್ಲಿ ವೇಗವಾಗಿ ನಡೆದ ತನಿಖೆ ಈಗ ನಿಂತು ಹೋಗಿದೆ. ಇದರಲ್ಲಿ ಪ್ರಭಾವಿ ರಾಜಕಾರಣಿಗಳು ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಸಂಶಯಗಳಿವೆ ಎಂದು ಅವರು ಹೇಳಿದರು.

ಸಿಬ್ಬಂದಿ ಸೇರಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದು ಭಕ್ತರು ಮತ್ತು ದೇವರಿಗೆ ಸೇರಿರುವ ಸೊತ್ತು. ಹಾಗಾಗಿ ಭಕ್ತರಿಗೆ ನೋವಾಗಿದೆ. ಇಂತಹ ಪ್ರಕರಣಗಳು ಮುಂದಕ್ಕೆ ನಡೆಯಬಾರದು. ಹಾಗಾಗಿ ಸಿಬ್ಬಂದಿಗಳ ಜತೆಗೆ ತಪ್ಪಿತಸ್ಥ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು. ಇದು ರಾಜಕೀಯ, ಪಕ್ಷಾತೀತ ಹೋರಾಟ ಎಂದು ಕಿಶನ್‌ ಹೆಗ್ಡೆ ಕೊಳ್ಕೆಬೈಲು ಹೇಳಿದರು. ರಮೇಶ್‌ ಗಾಣಿಗ, ಆಲೂರು ಮಂಜಯ್ಯ ಶೆಟ್ಟಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Exit mobile version