Kundapra.com ಕುಂದಾಪ್ರ ಡಾಟ್ ಕಾಂ

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವಿದ್ಯಾರ್ಥಿಗಳು ಕಲಿಯುವಿಕೆಯನ್ನು ಒಂದೇ ವಿಷಯದಲ್ಲಿ ತೊಡಗಿಸಿಕೊಳ್ಳದೇ, ಎಲ್ಲಾ ವಿಷಯದ ಜ್ಞಾನವನ್ನು ಹೊಂದಿರಬೇಕು. ಕಲಿಯುವಿಕೆಗೆ ಕೊನೆಯಿಲ್ಲ, ಅದು ನಿರಂತರವಾಗಿರುತ್ತದೆ. ಕಾರ್ಯಗಾರದ ನಂತರವು ವಿದ್ಯಾರ್ಥಿಗಳು ಹೆಚ್ಚಿನ ಸಂಶೋಧನೆಗಳ ಮೇಲೆ ಗಮನ ಹರಿಸಬೇಕು ಎಂದು ಪ್ರಮುಖ ಸಂಪನ್ಮೂಲ ವ್ಯಕ್ತಿ, ಆರ್. ವಿ. ಇಂಜಿನಿರಿಂಗ್ ಕಾಲೇಜಿನ ಪ್ರೊಫೆಸರ್ ಡಾ| ರೇಣುಕಾ ಪ್ರಸಾದ್, ಹೇಳಿದರು.

ಅವರು ಕಂಪ್ಯೂಟರ್ ಸೈನ್ಸ್ ವಿಭಾಗದವರು ಆಯೋಜಿಸಿದ ಫ್ರೀ ಓಪನ್ ಸೋರ್ಸ್ ಸಾಫ್ಟ್‌ವೇರ್ ಆಂಡ್ ಆಪ್ಲಿಕೇಶನ್ಸ್ ಎನ್ನುವ ಕಾರ್ಯಗಾರದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಸತೀಶ ಎಸ್. ಅಂಸಾಡಿ ಅವರು ವಹಿಸಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾವನ್ನು ಹೆಚ್ಚಿಸಿ ಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಕಂಪ್ಯೂಟರ್ ಸೈನ್ಸ್‌ನ ಚಟುವಟಿಕೆಗಳು ಉಳಿದ ವಿಭಾಗದವರಿಗೂ ಪ್ರೋತ್ಸಾಹ ಕೊಡುತ್ತಿದ್ದು, ಕಾಲೇಜಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅಧ್ಯಕ್ಷೀಯ ಬಾಷಣದಲ್ಲಿ ಹೇಳಿದರು.
ವಿಭಾಗದ ಮುಖ್ಯಸ್ಥ ಪ್ರೊ| ಮೆಲ್ವಿನ್ ಡಿ’ಸೋಜಾರವರು ಕಾಲೇಜಿನ ಚೇರ್‌ಮನ್ ಶ್ರೀ ಸಿದ್ದಾರ್ಥ ಜೆ. ಶೆಟ್ಟಿಯವರು ನೀಡಿದ ಪ್ರೋತ್ಸಾಹದಿಂದಲೇ ಈ ಶೈಕ್ಷಣಿಕ ವರ್ಷದಲ್ಲಿ ಮೂರು ಪ್ರಮುಖ ಕಾರ್ಯಾಗಾರವನ್ನು ಆಯೋಜಿಸಲು ಸಾಧ್ಯವಾಯಿತು ಎಂದರು.

ಕಾರ್ಯಾಗಾರದ ಇತರ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ| ಚಂದ್ರಶೇಖರ, ಪ್ರೊ| ವಿಶಾಲ್ ಸಿ. ಮತ್ತು ಕುಮಾರ ಸ್ವಾಮಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಅರುಣ ಎ. ಕಾರ್ಯಕ್ರಮ ನಿರೂಪಿಸಿದರು.

Exit mobile version