Kundapra.com ಕುಂದಾಪ್ರ ಡಾಟ್ ಕಾಂ

ಯುವಜನತೆ ದೇಶದ ಸಂಪತ್ತಾಗಬೇಕು: ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಡಾ. ಎಂ. ಮೋಹನ ಆಳ್ವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದಿನ ಯುವಶಕ್ತಿಯ ಮುಂದಿರುವ ಸವಾಲುಗಳು ಜಾಗತಿಕವಾಗಿವೆ. ಬೆಳೆಯಬೇಕು ಎಂಬ ತುಡಿತ, ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ವ್ಯವಸ್ಥೆ ಜೊತೆಗೆ ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕು. ಭವಿಷ್ಯವನ್ನು ಚೆನ್ನಾಗಿ ರೂಪಿಸುವತ್ತ ಗಮನ ಹರಿಸಿ ದೇಶದ ಅಪ್ರತಿಮ ಸಂಪತ್ತಾಗಬೇಕು ಎಂದು ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಇಅದರ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದಿನ ಯುವಜನತೆಯಲ್ಲಿ ಅಸಾಮಾನ್ಯ ಪ್ರತಿಭೆ, ಜ್ನಾನ , ಬುದ್ಧಿವಂತಿಕೆ ಇದೆ. ಅದಕ್ಕೆ ಪೂರಕಾವಾಗಿ ಕಲಿಯುವಿಕೆಗೆ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ಬದುಕಿನ ಕುರಿತು ಆಲೋಚಿಸಿ, ಗಮನಿಸಿ ಸವಾಲುಗಳನ್ನು ಹೋರಾಟದ ಮನೋಭಾವನೆಯಿಂದ ಸ್ವೀಕರಿಸಿ ಬದುಕನ್ನು ಹಸನಾಗಿಸುಕೊಳ್ಳುವಂತಹ ಪ್ರಜ್ನಾವಂತಿಕೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದೊಂದಿಗೆ ಪಾಠೇತರ ಚಟುವಟಿಕೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ಸಾಂಸ್ಕೃತಿಕ ಕಲೆ, ಆಚಾರ-ವಿಚಾರವನ್ನು ಕಲಿಯುವುದರೊಂದಿಗೆ ನಮ್ಮ ಸಾಂಸ್ಕೄತಿಕ ಶ್ರೀಮಂತಿಕೆಯನ್ನು ಸೂರ್ಯ -ಚಂದ್ರರಿರುವವರೆಗೂ ಅಜರಾಮರವಾಗಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರು ಡಾ.ಟಿ. ಎಮ್. ಎ ಪೈ ಅವರ ಕೈಂಕರ್ಯವನ್ನು ಅದರ ಹಿಂದಿರುವ ದೂರದೃಷ್ಟಿಯನ್ನು ನೆನೆಪಿಸಿದರು.

ಇನ್ನೋರ್ವ ಅತಿಥಿಗಳಾದ ಮೈಸೂರು ಮರ್ಕಂಟೈಲ್ ಕಂಪೆನಿ ಲಿಮಿಟೆಡ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಶೆಟ್ಟಿ ಮಾತನಾಡಿ ಭಾಷೆ ಎನ್ನುವುದು ನಮ್ಮ ಬದುಕನ್ನು ಕಟ್ಟುವಲ್ಲಿ ಮೊದಲಾಗುತ್ತದೆ. ನಮ್ಮ ಆತ್ಮವಿಶ್ವಾಸ, ಸಾಧಿಸಬೇಕೆಂಬ ಛಲವಿದ್ದರೆ ಯಶಸ್ವಿ ಬದುಕನ್ನು ಕಟ್ಟುವುದು ಸುಲಭಸಾಧ್ಯ ಎಂದರಲ್ಲದೇ ಈ ಸಂದರ್ಭದಲ್ಲಿ ಅವರು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ೧೦ ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನವನ್ನು ಘೋಷಿಸಿದರು. ಅಲ್ಲದೇ ೫ ವರ್ಷಗಳಿಗೊಮ್ಮೆ ಅದನ್ನು ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಿಶ್ವಸ್ಥರಾದ ಶ್ರೀ ಕೆ.ಶಾಂತಾರಾಂ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನಿಂದ ಸೇವಾ ನಿವೃತ್ತಿಯನ್ನು ಪಡೆದ ಪ್ರಾಧ್ಯಾಪಕರಾದ ಕನ್ನಡ ಪ್ರಾಧ್ಯಾಪಕ ಪ್ರೊ.ಆರ್. ಗೋವಿಂದಪ್ಪ ಮತ್ತು ವಾಣಿಜ್ಯ ಪ್ರಾಧ್ಯಾಪಕ ಪ್ರೊ. ವಸಂತ ಬನ್ನಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತರ ಕುರಿತು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಎಸ್.ಹೆಗಡೆ ಮಾತನಾಡಿದರು. ಕಾಲೇಜಿನ ಪ್ರತಿಭಾವಂತ ಮತ್ತು ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥರಾದ ಶ್ರೀ ಪ್ರಜ್ನೇಶ್ ಪ್ರಭು, ಮತ್ತು ವಾಣಿಜ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ಎಮ್.ವಿ.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪ್ರಕಾಶ್ ಸೋನ್ಸ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾಲೇಜಿನ ವಾರ್ಷಿಕ ವರದಿ ಓದಿದರು.
ಡಾ.ಹಯವದನ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಪ್ರೊ. ನಾರಾಯಣ ತಂತ್ರಿ ವಂದಿಸಿದರು.

Exit mobile version