Kundapra.com ಕುಂದಾಪ್ರ ಡಾಟ್ ಕಾಂ

ಯುವತಿಯ ಹಂತಕನಿಗೆ ಗಲ್ಲು ಶಿಕ್ಷೆ ಘೋಷಣೆ. ಕುಂದಾಪುರದಲ್ಲಿ ಪ್ರಥಮ ಬಾರಿಗೆ ಐತಿಹಾಸಿಕ ತೀರ್ಪು ಪ್ರಕಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಹಿಳೆಯೋರ್ವಳನ್ನು ಅಮಾನುಷವಾಗಿ ಕೊಲೆಗೈದು ರಸ್ತೆಯ ಬದಿಯಲ್ಲಿ ಎಸೆದಿದ್ದ ಅಪರಾಧಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ್ ವಿ. ಪಾಟೀಲ್ ಗಲ್ಲುಶಿಕ್ಷೆ ವಿಧಿಸಿದ್ದಾರೆ. ಆರು ವರ್ಷದ (ಜೂನ್ 2010) ಹಿಂದೆ ಅಕ್ಕಯ್ಯ ಯಾನೆ ಜಯಾ ಎಂಬಾಕೆಯನ್ನುಕೊಲೆಗೈದ ಹೆಮ್ಮಾಡಿ ಸತೀಶ್ ಪೂಜಾರಿ (30) ಗಲ್ಲುಶಿಕ್ಷೆಗೆ ಒಳಗಾದ ಆಪರಾಧಿ.

ಕೊಲೆ ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಸೂಕ್ತ ಸಾಕ್ಷಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕುಂದಾಪುರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಯು. ಶ್ರೀನಿವಾಸ ಹೆಗಡೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಘಟನೆಯ ವಿವರ:
ಕುಂದಾಪುರದ ಖಾಸಗಿ ಶಾಲಾ ವಾಹನವೊಂದರಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡಿಕೊಂಡಿದ್ದ ಅಕ್ಕಯ್ಯ ಯಾನೆ ಜಯಾ ಎಂಬಾಕೆ ಸತೀಶ್ ಪೂಜಾರಿ ಹಾಗೂ ಆತನ ಭಾವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಸತೀಶ್ ಪೂಜಾರಿಯ ಭಾವನೊಂದಿಗೆ ತನ್ನನ್ನು ಮದುವೆ ಮಾಡಿಕೊಂಡುವಂತೆ ಆತನನ್ನು ಪದೇ ಪದೇ ಪೀಡಿಸುತ್ತಿದ್ದಳು. ಆದರೆ ಸತೀಶ್ ಆತನ ಭಾವನಿಗೆ ಬೇರೊಂದು ಹುಡುಗಿಯೊಂದಿಗೆ ಮದುವೆ ಮಾಡಿದ ಬಳಿಕ ಅಕ್ಕಯ್ಯ ಸತೀಶನ ಬೆನ್ನು ಹತ್ತಿದ್ದಳು. ಆತನೊಂದಿಗೆ ಮದುವೆ ಮಾಡಿಸದೇ ತನಗೆ ಮೋಸ ಮಾಡಿದ್ದೀಯ. ನೀನೆ ತನ್ನೊಂದಿಗೆ ಮದುವೆಯಾಗು ಇಲ್ಲದಿದ್ದರೇ ಈ ವಿಚಾರವನ್ನು ಸಂಬಂಧಿಕರ ಬಳಿ ಹೇಳುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಆಕೆಯ ನಿರಂತರ ಬೆದರಿಕೆಯನ್ನು ತಾಳಲಾರದೇ ಸತೀಶ್ ಪೂಜಾರಿ ಒಂದು ಮಾರುತಿ ಓಮ್ನಿಯನ್ನು ಬಾಡಿಗೆಗೆ ಪಡೆದು ಮಧ್ಯಾಹ್ನದ ವೇಳೆಗೆ ಆಕೆಯನ್ನು ಕೊಳುರು ಕ್ರಾಸ್‌ನಿಂದ ಪಿಕ್‌ಅಪ್ ಮಾಡಿಕೊಂಡು ಮರವಂತೆ ಕಡೆಗೆ ತೆರಳಿದ್ದಾನೆ.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಮರವಂತೆಯಲ್ಲಿ ಓಮ್ನಿಯ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆಕೆಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯ ಕುತ್ತಿಗೆಯಲ್ಲಿದ್ದ ಶಾಲನ್ನೇ ಬಿಗಿಯಾಗಿ ಸುತ್ತಿ ಕೊಲೆಗೈದಿದ್ದಾನೆ. ಅಲ್ಲಿಂದ ಅದೇ ವಾಹನದ ಹಿಂಬಂದಿಯಲ್ಲಿಯೇ ಆಕೆಯ ಶವವನ್ನು ಹಾಕಿಕೊಂಡು ಮತ್ತೆ ಹೆಮ್ಮಾಡಿಯ ಹಿಂತಿರುಗಿದ್ದ ಸತೀಶ್, ಫ್ಯಾನ್ಸಿ ಅಂಗಡಿಯ ಎದುರು ವಾಹನವನ್ನು ನಿಲ್ಲಿಸಿ ಏನೂ ನಡೆದಿಲ್ಲ ಎನ್ನುವಂತೆ ವ್ಯವಹಾರ ನಡೆಸಿದ್ದಾನೆ. ಸಂಜೆಯಾಗುತ್ತಿದ್ದಂತೆಯೇ ವಾಹನದಲ್ಲಿ ನೂಜಾಡಿಗೆ ತೆರಳುವ ಕೊಳೂರು ಕ್ರಾಸ್ ಬಳಿ ರಸ್ತೆಬದಿಯಲ್ಲಿಯೇ ಆಕೆಯ ಶವವನ್ನು ಎಸೆದು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಪರಾಧಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾಗ ಮೊದಲು ಕಳವಾಗಿದ್ದ ಆಕೆ ಚಿನ್ನ ಪತ್ತೆಯಾಗಿತ್ತು. ಅದೂ ಅಲ್ಲದೇ ಆಕೆಯನ್ನು ಓಮ್ನಿಯಲ್ಲಿ ಕರೆದುಕೊಂಡು ಹೋಗುತ್ತಿದ್ದುದನ್ನು ಪ್ರತ್ಯಕ್ಷವಾಗಿ ಓರ್ವರು ಕಂಡಿದ್ದರು. ಅದರ ಆಧಾರ ಮೇಲೆಯೇ ವೃತ್ತ ನಿರೀಕ್ಷಕ ಮದನ್ ಗಾಂವ್ಕರ್ ಕೋರ್ಟಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪ್ರಕರಣದ ಕೂಲಂಕುಶ ತನಿಕೆ ನಡೆಸಿದ ನ್ಯಾಯಾಲಯ ೩೦೨ ಕೊಲೆ ಪ್ರಕರಣದಲ್ಲಿಯಲ್ಲಿ ತೀರ್ಪು ಪ್ರಕಟಿಸಿದ್ದು, ಆರೋಪಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಕುಂದಾಪುರದಲ್ಲಿ ಮೊದಲ ಭಾರಿಗೆ ಐತಿಹಾಸಿಕ ತೀರ್ಪನ್ನು ಪ್ರಕಟಿಸುವ ಮೂಲಕ ನ್ಯಾಯಧೀಶರು ಮಹಿಳೆಯರ ಕೊಲೆ ಪ್ರಕರಣದಲ್ಲಿ ಭಾಗಿಯಾಗುವರಿಗೆ ಎಚ್ಚರಿಕೆಯ ಕರೆಗಂಟೆ ರವಾನಿಸಿದ್ದಾರೆ. // ಕುಂದಾಪ್ರ ಡಾಟ್ ಕಾಂ ಸುದ್ದಿ.

Exit mobile version