ಕುಂದಾಪುರದಲ್ಲೂ ರೆಸಾರ್ಟ್ ರಾಜಕಾರಣದ ನಡಿಯಿತಂತೆ!
ಕುಂದಾಪುರ ಪುರಸಭೆ ಅಧ್ಯಕ್ಷರ ಪಕ್ಷದ ಬಗ್ಗೆ ವೃಥಾ ಚರ್ಚೆ. ಅಭಿವೃದ್ಧಿ ಕಾಮಗಾರಿಗಳ ಬಗೆಗಿಲ್ಲದ ಒಲವು
ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ರೆಸಾರ್ಟ್ ರಾಜಕಾರಣ ಮಾಡಿ ಕುಂದಾಪುರ ಪುರಸಭೆಯ ಮಾನ ಹರಾಜು ಹಾಕಲಾಗಿದೆ. ಕೈ ಚಿನ್ನೆಯಲ್ಲಿ ಗೆದ್ದು ಬಂದು, ಈಗ ಪಕ್ಷಾಂತರ ಮಾಡಿದವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಯಾವ ಪಕ್ಷಕ್ಕಾದರೂ ಹೋಗಲಿ. ತಾಕತ್ತಿದ್ದರೆ ರಾಜಿನಾಮೆ ಕೊಟ್ಟ ಮತ್ತೆ ಚುನಾವಣೆಗೆ ನಿಂತು ಗೆದ್ದು ಬನ್ನಿ. ಅದಕ್ಕೂ ಮೊದಲು ಅಧ್ಯಕ್ಷರು ಯಾವ ಪಕ್ಷದವರು ಅಂತ ಸ್ಪಷ್ಟ ಪಡಿಸಿ.
ಹೀಗೆಂದು ಕಾಂಗ್ರೆಸ್ ಪಕ್ಷದ ಸದಸ್ಯರೋರ್ವರು ಮಾತು ಮುಗಿಸುವುದರೊಳಗೆ ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ರಣರಂಗವಾಗಿ ಪರಿಣಮಿಸಿತ್ತು.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಕೆಲವು ಸದಸ್ಯರ ಆರೋಪ ಪ್ರತ್ಯಾರೋಪಗಳು ತಾರರಕ್ಕೇರಿ ನೀರಿನ ಬಾಟಲಿ, ಮೈಕ್ ಹಿಡಿದು ಹೊಡೆದಾಡುವವರೆಗೂ ಮುಂದುವರಿದಿತ್ತು. ಪುರಸಭೆ ಹಿರಿಯ ಸದಸ್ಯ ಮೋಹನ್‌ದಾಸ್ ಶೆಣೈ ಸದಸ್ಯರ ಮನ ಒಲಿಸುವ ಪ್ರಯತ್ನ ಮಾಡಿ, ಸದಸ್ಯರ ತಮ್ಮ ತಮ್ಮ ಸ್ಥಾನದಲ್ಲಿ ಕೂರುವಂತೆ ವಿನಂತಿಸಿದ ನಂತರ ಸದಸ್ಯರು ಕ್ಷಣ ಸುಮ್ಮನೆ ಕೂತರೂ, ಮತ್ತೊಂದು ವಿಷಯ ಎತ್ತಿಕೊಂಡು ವಾಕ್ಸಮರ ನಡೆಯಿತು. /ಕುಂದಾಪ್ರ ಡಾಟ್ ಕಾಂ ವರದಿ/
ಅಧ್ಯಕ್ಷರು ಪಕ್ಷ ಯಾವುದು ಸ್ಪಷ್ಟಪಡಿಸಿ :
ಸಾಮಾನ್ಯ ಸಭೆಯ ಆರಂಭದಲ್ಲೇ ವಿರೋಧ ಪಕ್ಷದ ಚಂದ್ರಶೇಖರ ಖಾರ್ವಿ ವಿಷಯ ಪ್ರಸ್ತಾಪಿಸಿ ಅಧ್ಯಕ್ಷರು ಕಾಂಗ್ರೆಸ್ ಚಿನ್ನೆಯಿಂದ ಚುನಾವಣೆಯಲ್ಲಿ ಗೆದ್ದು ಬಂದಿದ್ದು, ಈಗ ಅಧ್ಯಕ್ಷರು ಯಾವ ಪಕ್ಷಕ್ಕೆ ಸೇರಿದವರು ಎಂದು ಸ್ಪಷ್ಟ ಪಡಿಸುವಂತೆ ಒತ್ತಾಯಿಸಿದರು. /ಕುಂದಾಪ್ರ ಡಾಟ್ ಕಾಂ ವರದಿ/
ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಉತ್ತರಿಸಿ, ನಾನಾಗಲೇ ನನ್ನ ನಿಲುವು ಸ್ಪಷ್ಟ ಪಡಿಸಿದ್ದೇನೆ. ನಾನು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮತ್ತು ಬಿಜೆಪಿ ಬೆಂಬಲದಿಂದ ಅಧ್ಯಕ್ಷೆಯಾಗಿದ್ದು, ನನ್ನ ನಿಲುವು ಮಾಧ್ಯಮಗಳಲ್ಲೂ ಬಂದಿದ್ದು ಮತ್ತೆ ಸ್ಪಷ್ಟ ಪಡಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಮಹಿಳಾ ಸದಸ್ಯರಿಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳಲು ಒತ್ತಾಯ:
ಅಧ್ಯಕ್ಷರು ಹಾಗೂ ಮೂವರು ಮಹಿಳಾ ಸದಸ್ಯರನ್ನು ಉದ್ದೇಶಿಸಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಿರಿ ಎಂದ ಸದಸ್ಯ ಚಂದ್ರಶೇಖರ ಖಾರ್ವಿ ಮಾತಿನಿಂದ ಸಿಟ್ಟಿಗೆದ್ದ ಪುಷ್ಟಾ ಶೇಟ್, ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿದೆ. ಭೇಷರತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಇವರ ಬೆಂಬಲಕ್ಕೆ ನಿಂತ ಆಡಳಿತ ಪಕ್ಷದ ಸದಸ್ಯರಾದ ರವಿರಾಜ್ ಖಾರ್ವಿ, ವಿಠಲ ಕುಂದರ್, ವಿಜಯ ಪೂಜಾರಿ, ಉದಯ ಮೆಂಡನ್, ರಾಘವೇಂದ್ರ ವಿರೋಧ ಪಕ್ಷದವರು ಆರೋಪ ಹಿಂದಕ್ಕೆ ಪಡೆಯಬೇಕು. ಮತ್ತೂ ಕ್ಷಮೆ ಯಾಚಿಸಬೇಕು ಎಂದು ಅಧ್ಯಕ್ಷರ ಪೀಠದ ಮುಂದೆ ಧಾವಿಸಿ, ಬಳಿಕ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಧಿಕ್ಕಾರ ಕೂಗಿದರು. ರಾಜಿನಾಮೆ ಕೊಡಬೇಕು ಎಂದು ಕೇಳುವ ಕಾಂಗ್ರೆಸಿಗರು ಪಕ್ಷಾಂತರಗೊಂಡವರನ್ನು ಪಕ್ಷದಿಂದ ಉಚ್ಛಾಟಿಸಿಲಿ ಎಂದು ವಿರೋಧ ಪಕ್ಷದ ಸದಸ್ಯರಿಗೆ ಸವಾಲು ಹಾಕಿದರು. /ಕುಂದಾಪ್ರ ಡಾಟ್ ಕಾಂ ವರದಿ/
ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ರಾಜೇಶ್ ಕಾವೇರಿ ಹಾಗೂ ವಿರೋಧ ಪಕ್ಷದ ಹಿರಿಯ ಸದಸ್ಯರು, ಪುರಸಭೆ ಸಾಮಾನ್ಯ ಸಭೆ ರಾಜಕೀಯ ವೇದಿಕೆಯಲ್ಲ. ರಾಜಕೀಯ ಮಾಡಲು ಬೇರೆಯದೆ ವೇದಿಕೆ ಇದೆ. ಪುರಸರಭೆ ಅಭಿವೃದ್ಧಿ ಬಗ್ಗೆ ಬೇಕಾದರೆ ಮಾತನಾಡಿ. ರಾಜಕೀಯ ವೇದಿಕೆಯಲ್ಲಿ ಮಾತನಾಡಿದ ಹಾಗೆ ಮಾತನಾಡಬೇಡಿ. ಸದಸ್ಯ ಮಾತಿನಲ್ಲಿ ಹಿಡಿತವಿರಲಿ ಎಂದು ಎಚ್ಚರಿಸಿದರು.
ಗೌಜು ಗದ್ದಲದ ನಡುವೆ ಪುರಸಭೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದರೂ ಯಾವುದೂ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಲಿಲ್ಲ. ಆಯ-ವ್ಯಯದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಅಧಿಕಾರಗಳ ಮೇಲೆ ಅನುಮಾನ ಬರುತ್ತದೆ. ಅಯ-ವ್ಯಯ ಕುರಿತು ಸಮಿತಿಯಿಂದ ತನಿಖೆ ಮಾಡಬೇಕು ಎಂದು ರವಿರಾಜ ಖಾರ್ವಿ ಒತ್ತಾಯಿಸಿದ್ದು, ತಪ್ಪು ಸರಿಪಡಿಸುವ ಭರವಸೆ ಅಧಿಕಾರಿಗಳು ನೀಡಿದರು. ನೀರಿನ ಬಿಲ್ ಬಾಕಿ ಉಳಿಸಿಕೊಂಡ ಗ್ರಾಪಂಗಳ ಬಗ್ಗೆ ಪುರಸಭೆ ಏನು ಕ್ರಮ ಕೈಗೊಂಡಿದೆ ಎಂದು ಹಿರಿಯ ಸದಸ್ಯ ಮೋಹನ್ ದಾಸ್ ಶೆಣೈ ಪ್ರಶ್ನಿಸಿದರೆ, ಕೆಲವು ಕಡೆ ನೀರು ಸೋರಿ ವೇಸ್ಟ್ ಆಗುತ್ತಿದ್ದರೂ, ಪುರಸಭೆ ಕ್ರಮಕೈಗೊಂಡಿಲ್ಲ ಎಂದು ಸದಸ್ಯ ಉದಯ ಮೆಂಡನ್ ಆರೋಪಿಸಿದರು. ನೀರು ಸೋರಿಕೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ. ನೀರು ತೆರಿಗೆ ಬಾಕಿ ಉಳಿಸಿಕೊಂಡ ಗ್ರಾಪಂಗಳಿಗೆ ನೋಟಿಸ್ ಜಾರಿಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು. /ಕುಂದಾಪ್ರ ಡಾಟ್ ಕಾಂ ವರದಿ/
ಉಪಾಧ್ಯಕ್ಷರು, ಅಧ್ಯಕ್ಷರ ಕೊಠಡಿಯಲ್ಲಿ ಕೂರುವ ಬಗ್ಗೆ ಆಕ್ಷೇಪ ಎತ್ತಿದ್ದಕ್ಕೆ ಮತ್ತೆ ಸಭೆಯಲ್ಲಿ ಗೌಜ ಗದ್ದಲ ಆರಂಭವಾಯಿತು. ಹಂಪ್ಸ್ ಕಿತ್ತು ಮತ್ತೆ ಜೋಡಣೆ ಮಾಡಿದ್ದಕ್ಕೆ ಗೊಂದಲ ಹುಟ್ಟು ಹಾಕಿತು. ಒಟ್ಟಾರೆ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ಸಮಸ್ಯೆಗಳ ಚರ್ಚಿಸುವುದಕ್ಕಿಂತ ಹೆಚ್ಚಾಗಿ ಸದಸ್ಯರುಗಳ ಆರೋಪ ಪತ್ಯಾರೋಪಗಳಿಗೆ ಬಲಿಯಾಯಿತು.
ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಹಾಗೂ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು. /ಕುಂದಾಪ್ರ ಡಾಟ್ ಕಾಂ ವರದಿ/