Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಪಬ್ಲಿಕ್ ಸ್ಕೂಲ್: ಸಾದೃಶ್ಯ ಆರ್ಟ್ ಗ್ಯಾಲರಿ ಹಾಗೂ ಸ್ವಾಮಿ ವಿವೇಕಾನಂದರ ಪುತ್ಥಳಿ ಅನಾವರಣ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವಿದ್ಯಾರ್ಥಿಯ ನಡೆ, ನುಡಿ, ಶೀಲ, ಚಾರಿತ್ರ್ಯದಲ್ಲಿ ಗಮನಾರ್ಹ ಬದಲಾವಣೆಗಳಾಗಿ ಒಂದು ಸುಂದರ ವ್ಯಕ್ತಿತ್ವ ನಿರ್ಮಾಣವಾಗುವುದರ ಜೊತೆಗೆ ಸಮಾಜದ ಸತ್ಪ್ರಜೆಯಾಗುವಂತಾದರೇ ಶಿಕ್ಷಣದ ಉದ್ದೇಶ ಸಾರ್ಥಕ್ಯಗೊಳ್ಳಲಿದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಸ್ವಾಮಿ  ಜೀತಕಾಮನಂದಾಜಿ ಮಹಾರಾಜ್ ಹೇಳಿದರು.

ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ವಾಮೀ ವಿವೇಕಾನಂದರ ಪುತ್ಥಳಿಯನ್ನು ಅನಾವರಣಗೊಳಿಸಿದ ಬಳಿಕ ಸಾದೃಶ್ಯ ಆರ್ಟ್ ಗ್ಯಾಲರಿ ಲೋಕಾರ್ಪಣೆಗೊಳಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಬುದ್ದಿವಂತರು. ಆದರೆ ಬದುಕಿನ ಸಮಸ್ಯೆಗಳನ್ನು ಎದುರಿಸುವ ಮನೋಬಲದ ಕೊರೆತೆ ಕಾಡುತ್ತಿದೆ. ಶಿಕ್ಷಣದಿಂದ ವಿದ್ಯಾರ್ಥಿಯ ಬುದ್ಧಿಮತ್ತೆಯ ಜೊತೆಗೆ ಆತ್ಮಸ್ಥೈರ್ಯವೂ ಹೆಚ್ಚುವಂತಾಗಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಅಂಕಗಳಿಕೆಗೆ ಪ್ರಾಮುಖ್ಯತೆ ನೀಡಿದಷ್ಟೇ, ಅವರಲ್ಲಿನ ಸೃಜನಾತ್ಮಕ ಪ್ರತಿಭೆಗೆ ಪ್ರೂತ್ಸಾಹ ನೀಡುವಂತಾಗಬೇಕು ಎಂದರು.

ಗಿಡ, ಮರಗಳಿಂದ ತುಂಬಿರುವ ಗುರುಕುಲ ಶಿಕ್ಷಣ ಸಂಸ್ಥೆಯು ಅನಾದಿ ಕಾಲದ ಋಷಿಮುನಿಗಳ ಗುರುಕುಲ ಪದ್ದತಿ ನೆನಪಿಸುವಂತಿದೆ. ಇಲ್ಲಿನ ಪರಿಸರ ಮಕ್ಕಳ ಮನಸ್ಸು ಸೃಜನಾತ್ಮಕವಾಗಿ ಅರಳುವಂತೆ ಮಾಡುವಂತೆ ಮಾಡುವುದಲ್ಲದೇ ಪ್ರಕೃತಿಯಲ್ಲಿ ವೈವಿಧ್ಯತೆಯನ್ನು ತುಂಬಿಕೊಂಡು ಬೆಳೆಯುವಂತೆ ಮಾಡುತ್ತದೆ ಎಂದರು.

ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಎಂ.ಆರ್.ಪಿ,ಎಲ್ ಕಾರ್ಪೊರೇಟ್ ಕಮ್ಯುನಿಕೇಶನ್ ಡಿ.ಜಿ.ಎಂ ಲಕ್ಷ್ಮೀ ಕುಮಾರನ್, ಆರ್ಟ್ ಇಫ್ಯಾಕ್ಟ್-2016 ಚಿತ್ರ ಕಲಾ ಶಿಬಿರದ ಸಂಯೋಜಕ ದಿನೇಶ್ ಹೊಳ್ಳ, ಪ್ರಾಂಶುಪಾಲ ಭಾಸ್ಕರ ಬಾಲಚಂದ್ರು ನಾಯ್ಡು ಉಪಸ್ಥಿತರಿದ್ದರು. ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ ಅನುಪಮ ಎಸ್. ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನವೀನ್ ಅಲ್ಮೇಡ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕ ರಾಘವೇಂದ್ರ ನಿರೂಪಿಸಿದರು. ಗುರುಕುಲದ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ ಬಾಂಡ್ಯಾ ಸುಭಾಸ್ ಶೆಟ್ಟಿ ವಂದಿಸಿದರು.

ಸ್ವಾಮಿ ವಿವೇಕಾನಂದರ ಪುತ್ಥಳಿ ಲೋಕಾರ್ಪಣೆ ಹಾಗೂ ಸಾದೃಶ್ಯ ಆರ್ಟ್ ಗ್ಯಾಲರಿ ಉದ್ಘಾಟನೆಗೊಂಡ ಬಳಿಕ ಆರ್ಟ್ ಇಂಫ್ಯಾಕ್ಟ್-2016, ಒಂದು ದಿನದ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿತ್ತು.

Gurukula Public School Vakwady Saadrushya art Gallery inaugurated and Swami Vivekananda Statue inaugurated (2)

Exit mobile version