Kundapra.com ಕುಂದಾಪ್ರ ಡಾಟ್ ಕಾಂ

ಸಾಲಿಗ್ರಾಮ: ರಸ್ತೆ ಬದಿಯ ಬಾವಿಯಲ್ಲಿ ಅಪರಿಚಿತ ಶವ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಾಲಿಗ್ರಾಮ: ಪೇಟೆಯ ಪಟ್ಟಣ ಪಂಚಾಯಿತಿ ಮೀನು ಮಾರುಕಟ್ಟೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ೬೬ರ ಪೂರ್ವಕ್ಕಿರುವ ತೆರೆದ ಬಾವಿಯೊಂದರಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವದ ಗುರುತು ಈವರೆಗೆ ಪತ್ತೆಯಾಗದ ಕಾರಣ ಮೃತ ಯಾರಿರಬಹುದು ಎಂಬ ಕುತೂಹಲ ಸಾರ್ವಜನಿಕರನ್ನು ಕಾಡುತ್ತಿದೆ.

ಬೆಳಿಗ್ಗೆ ಸಾಲಿಗ್ರಾಮ ಮೀನು ಮಾರುಕಟ್ಟೆಯ ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದ ಟೈರ್ ರಿಸೋಲ್ ಅಂಗಡಿಯ ಬಳಿ ಬಂದಿದ್ದ ವ್ಯಕ್ತಿಯೋರ್ವರು ನೀರು ನೋಡು ಬಾವಿಗೆ ಇಣುಕಿದಾಗ ಗಂಡಸಿನ ಶವವೊಂದು ಮಕಾಡೆ ಮಲಗಿರುವುದನ್ನು ನೋಡಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಸ್ಥಳಕ್ಕೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ಅಮೀನ್, ಅಚ್ಯುತ ಪೂಜಾರಿ ಮೊದಲಾದವರು ಆಗಮಿಸಿ ಕೋಟ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದರು. ಸರಿಯಾದ ಆವರಣವಿಲ್ಲದೇ ನೀರು ತುಂಬುವ ಸಂಪಿನಂತೆ ಕಾಣುವ ಬಾವಿಯೊಳಗೆ ಇಳಿಯಲು ಅನುಭವಿಗಳು ಬಂದ ಬಳಿಕ ಕೋಟ ಪೊಲೀಸ್ ಠಾಣಾಧಿಕಾರಿ ಕಬ್ಬಾಳ್‌ರಾಜ್ ಸಮ್ಮುಖದಲ್ಲಿ ಹಗ್ಗ ಹಾಕಿ ಶವವನ್ನು ಮೇಲೆ ತೆಗೆಯಲಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ. /

ಶವವು ಸುಮಾರು ೪೫ ವರ್ಷದ ಗಂಡಿಸಿನದ್ದಾಗಿದ್ದು, ಲುಂಗಿ ಶರ್ಟ್ ಧರಿಸಿದ್ದು, ಎಡಗೈಯಲ್ಲಿ ವಾಚ್ ಕಟ್ಟಿದ್ದ ಮೃತದೇಹ ಎರಡು ಮೂರು ದಿನಗಳ ಕಾಲ ಸ್ವಲ್ಪ ನೀರಿರುವ ಬಾವಿಯಲ್ಲಿ ಇದ್ದ ಕಾರಣ ಗುರುತಿಸಲಾಗದ ಸ್ಥಿತಿಗೆ ತಲುಪಿದೆ. ಸ್ಥಳೀಯರು ಶವದ ಗುರುತು ಪತ್ತೆಗಾಗಿ ಪರಿಶೀಲಿಸಿದ್ದರು ಕೂಡ ಇದುವರೆಗೆ ಯಾರೂ ಕೂಡ ಶವದ ಗುರುತು ಪತ್ತೆ ಮಾಡಿಲ್ಲ. ಕೋಟ ಪೊಲೀಸ್ ಸಿಬ್ಬಂದಿಗಳು ಮಹಜರ್ ಮಾಡಿದ ಬಳಿಕ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಸ ಸಾಗಿಸುವ ವಾಹನದ ಮೂಲಕ ಶವವನ್ನು ಬ್ರಹ್ಮಾವರ ಶೈತ್ಯಾಗಾರಕ್ಕೆ ಕೊಂಡೊಯ್ಯಲಾಯಿತು. ಮೇಲ್ನೋಟಕ್ಕೆ ಆಕಸ್ಮಿಕವಾಗಿ ರಾತ್ರಿ ವೇಳೆ ತಿಳಿಯದೆ ಬಾವಿಗೆ ಬಿದ್ದಂತೆ ಕಾಣುತ್ತಿದ್ದು, ಕೋಟ ಪೊಲೀಸ್‌ರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ. /

Saligrama Unknow Body found in Well (4)

Exit mobile version