Kundapra.com ಕುಂದಾಪ್ರ ಡಾಟ್ ಕಾಂ

ಖಂಬದಕೋಣೆಯ ಪ್ರೀತಿ ಫೌಂಡೇಶನ್‌ನ ಎರಡನೆಯ ವಾರ್ಷಿಕೋತ್ಸವ

ತೊಡಕುಗಳನ್ನು ಸವಾಲಾಗಿ ಸ್ವೀಕರಿಸಬೇಕು: ಪ್ರತಾಪಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ದುಡಿಯುವವರಿಗೆ ಹತ್ತಾರು ತೊಡಕುಗಳು ಎದುರಾಗುವುದು ಸಹಜ. ಅವುಗಳನ್ನು ಸವಾಲಿನಂತೆ ಸ್ವೀಕರಿಸಿ ಮುನ್ನುಗ್ಗಿದರೆ ಗುರಿ ಸಾಧನೆ ಸಾಧ್ಯವಾಗುತ್ತದೆ. ಸಮಾಜ ಮುಖಿ ಕಾರ್ಯಗಳಲ್ಲಿ ಫಲಾಪೆಕ್ಷೆ ನುಸುಳದಿದ್ದರೆ ಮಾತ್ರ ಅವುಗಳು ಸೇವೆ ಎನಿಸುತ್ತವೆ. ಖಂಬದಕೋಣೆಯ ಪ್ರೀತಿ ಸೇವಾ ಸಂಸ್ಥೆ ಸಮುದಾಯದ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ತೋರುತ್ತಿರುವ ಕಾಳಜಿ ಅನುಕರಣೀಯ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಖಂಬದಕೋಣೆಯ ಪ್ರೀತಿ ಫೌಂಡೇಶನ್‌ನ ಎರಡನೆಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ ಸೇವಾ ಕಾರ್ಯದಲ್ಲಿ ಹೊಂದಿರುವ ಪ್ರೀತಿಗೆ ಸಮಾನವಾದ ತೃಪ್ತಿ ಮಾಡಿದವನಿಗೆ ಲಭಿಸುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಹಾಲಿ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ ದೇವಾಡಿಗ, ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ, ನಾವುಂದದ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಎನ್. ಕೆ. ಬಿಲ್ಲವ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೇಕಬ್ ಡಿ’ಸೋಜ ಶುಭ ಹಾರೈಸಿದರು.

ಅನೂಷಾ, ಶಾಂತಿ, ಜ್ಯೋತಿ ಪ್ರಾರ್ಥಿಸಿದರು. ಸಂಸ್ಥೆಯ ವಿಶ್ವಸ್ಥ ನಾಗರಾಜ ಅಪ್ಪೇಡಿ ಸ್ವಾಗತಿಸಿದರು. ಇನ್ನೋರ್ವ ವಿಶ್ವಸ್ಥ ಸುರೇಶ ವಿ. ಕೆ. ಪ್ರಸ್ತಾವನೆಗೈದರು. ಉಪಾಧ್ಯಕ್ಷ ಚಂದ್ರ ಅಮೀನ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ಅಂತಾರಾಷ್ಟ್ರೀಯ ಮಟ್ಟದ ಅತ್ಲೀಟ್ ಶಂಕರ ಪೂಜಾರಿ ಕಾಡಿನತಾರು, ಎತ್ತರ ಜಿಗಿತದಲ್ಲಿ ರಾಜ್ಯ ಮಟ್ಟದ ಸಾಧಕಿ ಅಕ್ಷತಾ ಪೂಜಾರಿ ಗುಡ್ಡಿಮನೆ, ಗಣಿತ ಪ್ರತಿಭೆ ವಿಘ್ನೇಶ್ ಶ್ರೀಧರ ಪೂಜಾರಿ, ಗೌರಿ ದೇವಾಡಿಗ, ಮಹೇಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಅಂಗವೈಕಲ್ಯಕ್ಕೊಳಗಾಗಿರುವ ಭಟ್ರಹಿತ್ಲು ಸುರೇಶ ದೇವಾಡಿಗ ಮತ್ತು ಪಡುವಾಯಿನಮನೆ ನಾಗರಾಜ ದೇವಾಡಿಗರಿಗೆ ನೆರವು ವಿತರಣೆ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಡೆಯಿತು. ಸಂಸ್ಥೆಯ ಆಡಳಿತ ವಿಶ್ವಸ್ಥ ರಂಗ ಎಸ್. ಪೂಜಾರಿ, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಮನೋರಂಜನಾ ಕಾರ್ಯಕ್ರಮವಾಗಿ ಸ್ಥಳೀಯ ಪುಟಾಣಿಗಳಿಂದ ನೃತ್ಯ ವೈವಿಧ್ಯ, ಮುಂಬೈಯ ಅಂಕಿತಾ ನಾಯಕ್, ಸೌಜನ್ಯಾ ಬಿಲ್ಲವ ಮತ್ತು ಪ್ರಥ್ವಿ ಪೂಜಾರಿ ಅವರಿಂದ ನೃತ್ಯತರಂಗ, ಶಿವಮೊಗ್ಗದ ಸ್ಫೂರ್ತಿ ಸಾಂಸ್ಕೃತಿಕ ಸಂಸ್ಥೆಯಿಂದ ಏಕವ್ಯಕ್ತಿ ನಾಟಕ ’ಮೈಥಿಲಿ’ ಪ್ರದರ್ಶನ ನಡೆದುವು. ಜಾನಪದ ಗೀತೆಯ ನೃತ್ಯ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಬೈಂದೂರು ರಿದಂ ಡಾನ್ಸ್ ಸಂಸ್ಥೆಯ ನಾಗೇಂದ್ರ ದೇವಾಡಿಗ ತೀರ್ಪುಗಾರರಾಗಿದ್ದರು.

Exit mobile version