Kundapra.com ಕುಂದಾಪ್ರ ಡಾಟ್ ಕಾಂ

ಆರ್ಥಿಕ ಸಮಾನತೆಯಿಂದ ಸಾಮಾಜಿಕ ಪರಿವರ್ತನೆ: ಜಯಪ್ರಕಾಶ್ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಬಸವಣ್ಣನವರು ಜಾತ್ಯಾತೀತ ಸಮಾಜ ನಿರ್ಮಾಣ ಮಾಡಲು ಹೊರಟ ಮಹಾನ್ ದಾರ್ಶನಿಕ. ಸಾಮಾಜಿಕ ನ್ಯಾಯ, ವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಸಮಾನತೆ ಮತ್ತು ವಿಶ್ವ ಬಂಧುತ್ವದ ವಿಚಾರಗಳನ್ನು ಬಹಳ ಗಂಭೀರವಾಗಿ ಪ್ರತಿಪಾದಿಸಿದ ಬಸವಣ್ಣನವರ ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.

ಅವರು ಸೋಮವಾರ ಮೇಲ್‌ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಶ್ರೀ ಬಸವೇಶ್ವರ ದೇವಸ್ಥಾನದ ಶ್ರೀ ಬಸವೇಶ್ವರ ಬಾಲಕರ ಭಜನಾ ತಂಡದ ದಶಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿ ಆರ್ಥಿಕ ಸಮಾನತೆ ಬಂದಾಗ ಸಾಮಾಜಿಕ ಪರಿವರ್ತನೆ ಬರುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಬಹಳಷ್ಟು ಪ್ರಗತಿ ಕಂಡಿದ್ದು, ಜನಸಂಖ್ಯಾ ಸ್ಪೋಟದ ಪರಿಣಾಮ ಅಭಿವೃದ್ಧಿ ಕುಂಠಿತಗೊಂಡಿದೆ. ಹೀಗಾಗಿ ಜನಸಾಮಾನ್ಯರು ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಜನಪ್ರತಿನಿಧಿಗಳು ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಂಘ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದರು.

ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಆನಂದ, ಗಂಗೊಳ್ಳಿಯ ಉದ್ಯಮಿ ವಾಸುದೇವ ಶೇರುಗಾರ್, ಪತ್ರಕರ್ತ ಬಿ.ರಾಘವೇಂದ್ರ ಪೈ ಶುಭ ಹಾರೈಸಿದರು. ಇದೇ ಸಂದರ್ಭ ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಅವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಲಾಯಿತು. ಶ್ರೀ ಬಸವೇಶ್ವರ ಬಾಲಕರ ಭಜನಾ ತಂಡದ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು. ಉದ್ಯಮಿ ಅರುಣಕುಮಾರ್, ಗ್ರಾಪಂ ಮಾಜಿ ಸದಸ್ಯೆ ಪದ್ಮಾ, ದೇವಸ್ಥಾನದ ಕಾರ್ಯದರ್ಶಿ ಶಂಕರ ಎಂ.ಜಿ., ಈಶ್ವರ ಬಿ. ಮೊದಲಾದವರು ಉಪಸ್ಥಿತರಿದ್ದರು. ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Exit mobile version