Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಐಕ್ಯತೆಗೆ ಶಂಕರರ ಕೊಡುಗೆ ಅಪಾರ: ಡಾ. ಶಿಕಾರಿಪುರ ಕೃಷ್ಣಮೂರ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಭರತ ಖಂಡದ ಉದ್ದಗಲಕ್ಕೂ ಸಂಚರಿಸಿ ಧಾರ್ಮಿಕ ಮತ್ತು ಸಾಂಸ್ಕ್ರತಿಕ ತಳಹದಿಯಲ್ಲಿ ಸಮನ್ವಯತೆ, ಏಕತೆಯನ್ನು ಸಾಧಿಸುವಲ್ಲಿ ಶ್ರೀಶಂಕರ ಭಗವತ್ಪಾದರ ಕೊಡುಗೆ ಅಪಾರ. ಶಂಕರಾಚಾರ್ಯರ ಜನ್ಮ ದಿನವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುವುದು ಅವರನ್ನು ಅವತಾರಿ ಪುರುಷರೆಂದು ದಿನನಿತ್ಯ ಅವರ ಸಾಧನೆಗಳನ್ನು ನೆನಪಿಸುವುದು ನಮ್ಮೆಲ್ಲರ ಕೃತಜ್ಞತೆಯ ದ್ಯೋತಕವಾಗಿದೆ ಎಂದು ಕರ್ನಾಟಕ ರಾಜ್ಯ ಶಂಕರ ತತ್ತ್ವ ಪ್ರಸಾರ ಅಭಿಯಾನಂನ ಸಂಚಾಲಕ ಡಾ. ಶಿಕಾರಿಪುರ ಕೃಷ್ಣಮೂರ್ತಿಯವರು ನುಡಿದರು.

ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ನಡೆದ ಶ್ರೀಶಂಕರ ಅಷ್ಟೋತ್ತರ ಶತನಾಮಾವಳಿ ಜಪಯಜ್ಞ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಪೂರ್ವ ಪರಂಪರೆ ಮತ್ತು ಸಂಸ್ಕಾರ ವಿಶೇಷತೆಗಳ ಪರಿಚಯ ಮತ್ತು ಅನುಷ್ಠಾನಗಳಿಗಾಗಿ ತಳಮಟ್ಟದಲ್ಲಿ ಧರ್ಮಾಭಿಮಾನಿಗಳು ಸಂಘಟಿತರಾಗಿ ಕ್ರಿಯಾಶೀಲರಾಗುವುದು ಅವಶ್ಯ. ವೇದ ಸಾಹಿತ್ಯ, ದರ್ಶನ ಸಾಹಿತ್ಯ ಮತ್ತು ಆಚಾರ ಸಂಹಿತೆಗಳ ಪ್ರಸ್ತುತತೆ ಕುರಿತು ಚಿಂತನ-ಮಂಥನದಿಂದ ಪ್ರಜ್ಞಾವಂತ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಉಪ್ಪುಂದ ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದದ ಸ್ವಗೃಹದಲ್ಲಿ ಹದಿಮೂರು ಶಾಖಂ ಋಕ್ ಸಂಹಿತಾ ಯಾಗ ನಡೆಸಿದ ವೇದಮೂರ್ತಿ ಯು.ವಿಶ್ವನಾಥ ಹೊಳ್ಳರನ್ನು ಸಮಿತಿಯ ಪರವಾಗಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ’ಶಂಕರಭಗವತ್ಪಾದಕರು ಒಂದು ಅಧ್ಯಯನ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಕೇಂದ್ರ, ಶ್ರೀ ಲಕ್ಷ್ಮೀ ವೆಂಕಟರಮಣ ಕೇಂದ್ರ, ವಿಪ್ರರಂಜನಿ, ಶಂಕರ ಕಲಾಕೇಂದ್ರ ಮತ್ತು ಗ್ರಾಮವಿಕಾಸ ಸಮಿತಿಯವರು ಕೈಗೊಂಡ ಜಪಾನುಷ್ಠಾನದ ಸಮರ್ಪಣಾ ಕಾರ್ಯ ನಡೆಯಿತು. ವಿಪ್ರರಂಜನಿ ತಂಡದವರಿಂದ ಶ್ರೀಶಂಕರಾಚಾರ್ಯ ವಿರಚಿತ ಸ್ತ್ರೋತ್ರಗಳನ್ನು ಪಠಿಸಲಾಯಿತು. ತಿರುಮಲೇಶ ಭಟ್ಟ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಯು ರಮೇಶ ವೈದ್ಯ ಉಪಸ್ಥಿತರಿದ್ದರು. ಅಭಯ ಮಯ್ಯ ಪ್ರಾರ್ಥಿಸಿದರು, ಯು. ವರಮಹಾಲಕ್ಷ್ಮೀ ಹೊಳ್ಳ ಸ್ವಾಗತಿಸಿ, ಯು. ಗಣೇಶ ಪ್ರಸನ್ನ ಮಯ್ಯ ನಿರೂಪಿಸಿದರು. ಯು ಸಂದೇಶ ಭಟ್ಟ ವಂದಿಸಿದರು.

Exit mobile version