Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅವರಿಗೆ ಸನ್ಮಾನ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : 12ನೇ ಶತಮಾನದಲ್ಲಿ ಕ್ರಾಂತಿಕಾರ ಬದಲಾವಣೆಯನ್ನು ತಂದ ಬಸವಣ್ಣನವರು ಜಾತ್ಯಾತೀತ ಸಮಾಜ ನಿರ್ಮಾಣ ಮಾಡಲು ಹೊರಟ ಮಹಾನ್ ದಾರ್ಶನಿಕ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ವಿಶ್ವ ಬಂಧುತ್ವದ ವಿಚಾರಗಳನ್ನು ಬಹಳ ಗಂಭೀರವಾಗಿ ಪ್ರತಿಪಾದಿಸಿದ ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸುಸ್ಥಿರವಾದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ಮೇಲ್‌ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಬಾವಿಕಟ್ಟೆ ಮೇಲ್‌ಗಂಗೊಳ್ಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಮೇಲ್‌ಗಂಗೊಳ್ಳಿ ಮತ್ತು ಪಂಚಗಂಗಾವಳಿ ಒಕ್ಕೂಟದ ಆಶ್ರಯದಲ್ಲಿ ಜರಗಿದ ಬಸವ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು, ಆದರ್ಶದ ದಾರಿದೀಪವಾಗಿರುವ ಅಪ್ಪಣ್ಣ ಹೆಗ್ಡೆಯವರು ಉಡುಪಿ ಜಿಲ್ಲೆಯ ಬಸವಣ್ಣನವರು. ಇವರ ನಡವಳಿಕೆ, ಮಾತು, ಕೃತಿ ಹಾಗೂ ಬದುಕು ಎಲ್ಲರಿಗೂ ಮಾದರಿಯಾಗಿದೆ. ಯಾವುದೇ ಜಾತಿ ಮತ, ಧರ್ಮಗಳ ಬೇಧವಿದಲ್ಲದೆ ಎಲ್ಲರನ್ನು ಸಮಾನವಾಗಿ ಕಂಡು ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ ಶ್ರಮಿಸುತ್ತಿರುವ ಅಪ್ಪಣ್ಣ ಹೆಗ್ಡೆಯವರು ಈ ರಾಜ್ಯ ಕಂಡ ಓರ್ವ ಅಜಾತಶತ್ರು ಎಂದರು. ಸರಕಾರಗಳು ಜನರಲ್ಲಿ ತಾರತಮ್ಯದ ವಿಷಬೀಜ ಬಿತ್ತುತ್ತಿದ್ದು, ಓಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಹೀಗಾಗಿ ನಮ್ಮಲ್ಲಿನ ಕೀಳರಿಮೆಯ ಭಾವನೆಗಳನ್ನು ಹೋಗಲಾಡಿಸಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾನತೆಯ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.

ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಪತ್ರಕರ್ತ ಬಿ.ರಾಘವೇಂದ್ರ ಪೈ, ಗಂಗೊಳ್ಳಿ ಗ್ರಾಪಂ ಸದಸ್ಯ ಯೂನಿಸ್ ಸಾಹೇಬ್ ಶುಭಾಶಂಶನೆಗೈದರು. ಇದೇ ಸಂದರ್ಭ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್‌ಗಂಗೊಳ್ಳಿ ಒಕ್ಕೂಟದ ಅಧ್ಯಕ್ಷ ಅರುಣ್‌ಕುಮಾರ್, ಪಂಚಗಂಗಾವಳಿ ಒಕ್ಕೂಟದ ಅಧ್ಯಕ್ಷ ಕೃಷ್ಣ ಪೂಜಾರಿ, ಶ್ರೀ ಬಸವೇಶ್ವರ ದೇವಸ್ಥಾನದ ಉಪಾಧ್ಯಕ್ಷ ಪ್ರದೀಪ ಎಂ.ಜಿ., ಕಾರ್ಯದರ್ಶಿ ಶಂಕರ ಎಂ.ಜಿ., ಓಂ ಶ್ರೀ ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ ಮೊದಲಾದವರು ಉಪಸ್ಥಿತರಿದ್ದರು. ವಕೀಲರಾದ ಆನಂದ ಕೆ. ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version