Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ

ಸೇವಾಮನೋಭಾವದಿಂದ ಆತ್ಮತೃಪ್ತಿ ದೊರೆಯುತ್ತದೆ : ಜಗನ್ನಾಥ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವೃತ್ತಿ ಎಂಬುದು ನಮ್ಮ ಬದುಕಿಗಾಗಿಯಾದರೂ ನಮ್ಮಿಂದಾದ ಸಹಾಯವನ್ನು ಅರ್ಹರಿಗೆ ಮಾಡಬೇಕು. ದುಡಿಮೆಯ ಒಂದಂಶ ಅಶಕ್ತರಿಗೆ, ದೀನದಲಿತರಿಗೆ ನೀಡಿ ಅವರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಿದಾಗ ಸಮಾಜದಲ್ಲಿ ಸುಧಾರಣೆ ಸಾಧ್ಯ. ಆರೋಗ್ಯದ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ನೇತ್ರ ತಪಾಸಣಾ ಶಿಬಿರಗಳು ಸಹಾಕಾರಿಯಾಗಿವೆ ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ.ಜಗನ್ನಾಥ ಶೆಟ್ಟಿಯವರು ನುಡಿದರು.

ಅಂಜಲಿ ಆಸ್ಪತ್ರೆ, ಬೈಂದೂರು, ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ, ಸಿನಿಯರ್ ಸಿಟಿಜನ್ ಅಸೋಸಿಯೇಷನ್ ಬೈಂದೂರು ಇವರ ಆಶ್ರಯದಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ ಕೋಟ, ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ ಚಾರಿಟೀಸ್ (ರಿ.), ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ವಾರಣಾ ವಿಭಾಗ ಉಡುಪಿ, ಲಯನ್ಸ್ ಲಯನೆಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಸಹಯೋಗದಲ್ಲಿ ಅಂಜಲಿ ಆಸ್ಪತ್ರೆಯಲ್ಲಿ ನಡೆದ ಸಂಪೂರ್ಣ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಾನು ನನ್ನದು ಎನ್ನುವ ಸಂಕುಚಿತ ಭಾವನೆಯಿಂದ ನಮ್ಮದು ಎನ್ನುವ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ. ವೈಯಕ್ತಿಕ ಹಿತಾಸಕ್ತಿಗಿಂತ ಸಾರ್ವತ್ರಿಕವಾದ ಚಿಂತನೆ ಬಹುಮುಖ್ಯ. ಹಾಗಿದ್ದಾಗ ಬಾಳಿನಲ್ಲಿ ತೃಪ್ತಿ, ನೆಮ್ಮದಿ, ಸಂತೋಷ ಮೂಡಲು ಸಾಧ್ಯ. ವೈದ್ಯಕೀಯ ಕ್ಷೇತ್ರ ಇಂದು ವ್ಯಾವಹಾರಿಕವಾಗುತ್ತಿರುವುದು ಬೇಸರದ ವಿಚಾರ. ರೋಗಿಗಳು ವೈದ್ಯರ ಕುರಿತು ಗೌರವ, ನಂಬಿಕೆ ವ್ಯಕ್ತಪಡಿಸುವಂತೆ ವೈದ್ಯರು ರೋಗಿಗಳ ಮೇಲೆ ಮಾನವೀಯತೆಯನ್ನು ತೋರಬೇಕಾಗಿದೆ. ರೋಗಿ-ವೈದ್ಯರ ಸಂಬಂಧ ಉತ್ತಮವಾಗಿದ್ದಾಗ ಆರೋಗ್ಯಪೂರ್ಣ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ನೇತ್ರ ತಜ್ಞ ಡಾ. ಕೆ.ಎನ್.ಉದಯಕುಮಾರ್ ಕಣ್ಣಿನ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಬೈಂದೂರು ಸಿನಿಯರ್ ಸಿಟಿಜೆನ್ ಅಸೋಸಿಯೇಷನ್ ಅಧ್ಯಕ್ಷ ವಸಂತ ಹೆಗ್ಡೆ, ಶ್ರೀ ಮಾರಿಕಾಬ ಯುತ್ ಕ್ಲಬ್ ಅಧ್ಯಕ್ಷ ಕೃಷ್ಣ ಚಂದನ್, ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ನಿರ್ದೇಶಕ ಎ.ಎಸ್.ಹೆಗ್ಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿನಿಯರ್ ಸಿಟಿಜೆನ್ ಅಸೋಸಿಯೇಷನ್ ಕಾರ್ಯದರ್ಶಿ ಸಂಜೀವ ಆಚಾರ್ಯ ಸ್ವಾಗತಿಸಿದರು, ಡಾ. ಸುಭಾಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. /ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version