ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಾಲೂಕಿನ ವಂಡ್ಸೆ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಯವರನ್ನು ನೇಮಕ ಮಾಡಲಾಗಿದೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿಇಡ್ ಪದವಿಧರರಾದ ಇವರು ಕಳೆದ ಒಂದು ದಶಕದಿಂದ ಪತ್ರಕರ್ತರಾಗಿ ಚಿರಪರಿಚಿತರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ಕಥೆ, ಕವನ, ಲೇಖನಗಳನ್ನು ನಿರಂತರವಾಗಿ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿ ಕಲಾವಿದರಾಗಿ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು, ವಿವಿಧೆಡೆಗಳಲ್ಲಿ ಸಂಗೀತ ರಸಮಂಜರಿ, ಶಾಲಾ ಮಕ್ಕಳ ಹಾಡುಗಳ ಧ್ವನಿಮುದ್ರಿಕೆಗೆ ಹಾಡಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ರಾಜೇಶ ಶಿಬಾಜೆ ಗ್ರಾಮೀಣ ಪತ್ರಿಕೋದ್ಯಮ ಗೌರವ, ಜೇಸಿಐ ಸಾಧನಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ. ಇದೀಗ ಅವರನ್ನು 2016-19ನೇ ಸಾಲಿನ ಕಸಾಪ ವಂಡ್ಸೆ ಹೋಬಳಿಯ ಅಧ್ಯಕ್ಷರಾಗಿ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇಮಕ ಮಾಡಿದ್ದಾರೆ.