Kundapra.com ಕುಂದಾಪ್ರ ಡಾಟ್ ಕಾಂ

ಧರ್ಮಕ್ಷೇತ್ರಗಳಿಗೆ ಸಾಮಾಜಿಕ ಬದ್ಧತೆ ಇರಬೇಕು: ಡಾ. ಜಿ. ಜಿ. ಸಭಾಹಿತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಧಾರ್ಮಿಕ ಕ್ಷೇತ್ರವೂ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಅದು ಸಾಮಾಜಿಕ ಬದ್ಧತೆಯಿಂದ ಕೆಲಸಮಾಡಬೇಕಾದ ಅನಿವಾರ್ಯತೆ ಇದೆ ಎಂದು ಇಡಗುಂಜಿಯ ಸಿದ್ಧಿವಿನಾಯಕ ಕ್ಷೇತ್ರದ ಆಡಳಿತ ಧರ್ಮದರ್ಶಿ ಡಾ. ಜಿ. ಜಿ. ಸಭಾಹಿತ ಹೇಳಿದರು.

ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಪುನರ್‌ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶೋತ್ಸವದ ವರ್ಧಂತ್ಯುತ್ಸವದ ನಿಮಿತ್ತ ಶನಿವಾರ ನಡೆದ ಧರ್ಮಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ದೇವಾಲಯಗಳ ಜೀರ್ಣೋದ್ಧಾರ ನಡೆದರೆ ಅವು ಸಮಾಜದ ನೆಮ್ಮದಿಯ ತಾಣಗಳಾಗುತ್ತವೆ. ಜನರು ತಮ್ಮ ದುಡಿಮೆಯ ಹಣವನ್ನು ದೇವಾಲಯಕ್ಕೆ ನೀಡಿದರೆ ಅದರಿಂದ ಸತ್ಫಲ ಪ್ರಾಪ್ತಿಯಾಗುತ್ತದೆ. ದೇವರಿಗೂ ತನ್ನ ಭಕ್ತರು ಚೆನ್ನಾಗಿರಬೇಕೆಂಬ ಇಚ್ಛೆ ಇರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ ದೇವಸ್ಥಾನ ಶ್ರದ್ಧಾಕೇಂದ್ರ. ಅದರ ಆಡಳಿತ ಮಂಡಳಿಯಲ್ಲಿ ರಾಜಕೀಯೇತರ ಪ್ರಾಮಾಣಿಕ ವ್ಯಕ್ತಿಗಳಿರಬೇಕು. ಹಾಗಿದ್ದರಷ್ಟೆ ಆ ದೇವಸ್ಥಾನದ ಬಗ್ಗೆ ಭಕ್ತರು ವಿಶ್ವಾಸ ತಾಳುತ್ತಾರೆ ಎಂದರು.

ದೇವಳ ಕಾರ್ಯನಿರ್ವಹಣಾಧಿಕಾರಿ ಕೆ. ಪಿ. ಚಿದಂಬರ, ಆಡಳಿತ ಮಂಡಳಿಯ ಮಾಜಿ ಸದಸ್ಯೆ ಶಾರದಾ ಬಿಜೂರು ಶುಭ ಹಾರೈಸಿದರು. ಆಡಳಿತ ಸಮಿತಿಯ ಮಾಜಿ ಸದಸ್ಯ ನರಸಿಂಹ ಖಾರ‍್ವಿ, ಮರವಂತೆ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಬಿ. ವೆಂಕಟರಮಣ ಖಾರ‍್ವಿ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಮಾಜಿ ಸದಸ್ಯ ಡಾ. ಎಂ. ರತ್ನಾಕರ ಹೆಬ್ಬಾರ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ವಂದಿಸಿದರು. ರಾಜೇಶ್ ಪಡುಕೋಣೆ ನಿರೂಪಿಸಿದರು.
ವರ್ಧಂತ್ಯುತ್ಸವದ ಅಂಗವಾಗಿ ಮಹಾವಿಷ್ಣು ಯಾಗ, ಅನ್ನಸಂತರ್ಪಣೆ, ಪಂಡಿತ್ ರವಿಕಿರಣ ಮತ್ತು ಬಳಗದವರಿಂದ ಭಕ್ತಿ-ಭಾವ-ಸಂಗಮ ಸಂಗೀತ ಕಾರ್ಯಕ್ರಮ ನಡೆಯಿತು.

Exit mobile version