ನರೇಂದ್ರ ಎಸ್ ಗಂಗೊಳ್ಳಿ.
ನಾವು ಎಷ್ಟೇ ಮುಂದುವರೆದಿದ್ದೀವಿ ಅಂದರೂ ಕೂಡ ಇವತ್ತಿಗೂ ಬಹಳಷ್ಟು ಮನಸ್ಸುಗಳಲ್ಲಿ ಪುರುಷ ಪ್ರಧಾನ ಸಮಾಜದ ದೌಲತ್ತು ಮತ್ತು ಹೆಣ್ಣುಮಕ್ಕಳಿಗೆ ಒಂದು ನಿರ್ದಿಷ್ಠ ಚೌಕಟ್ಟನ್ನು ಹಾಕಿ ಅವರು ಹೀಗೆ ಇದ್ದರೆ ಚೆನ್ನ ಎನ್ನುವಂತಹ ಭಾವನೆ ಇರುವುದು ಸತ್ಯ. ಆ ಮನಸ್ಥಿತಿ ಒಳ್ಳೆಯ ಉದ್ದೇಶವನ್ನು ಹೊಂದಿದ್ದರೆ ಸರಿ. ಆದರೆ ಕ್ರೀಡೆಯ ವಿಚಾರಗಳಲ್ಲೂ ಕೂಡ ನೀವು ಮೈತುಂಬಾ ಬಟ್ಟೆ ಹಾಕಿಕೊಳ್ಳಿ , ಸೀರೆ ತೊಟ್ಟು ಕುಸ್ತಿ ಮಾಡಿ, ಬುರ್ಖಾ ತೊಟ್ಟು ಟೆನ್ನಿಸ್ ಆಡಿ ಎನ್ನುವಂತಹ ವಿಕ್ಷಿಪ್ತ ಮನಸ್ಸುಗಳ ವರ್ತನೆಗಳು ಮಾತ್ರ ಯಾವತ್ತೂ ಖಂಡನೀಯ. ನಿಲುವಂಗಿ ಧರಿಸಕೊಂಡು ನದಿಯಲ್ಲಿ ಈಜಲಾದೀತೆ? ಈ ನಡುವೆ ಸಾಧನೆಗೆ ಡ್ರೆಸ್ ಕೋಡ್ ಮುಖ್ಯ ಅಲ್ಲ ಎಂದು ಪೋಟೋಶಾಪ್ ನಲ್ಲಿ ಫೋಟೋಗಳನ್ನು ಎಡಿಟ್ ಮಾಡಿ ವಿವರಗಳನ್ನೇ ದಾಖಲಿಸದೆ ತಮ್ಮ ವರ್ಗದ ಮಹಿಳೆಯರನ್ನು ಪ್ರಥಮ ಸ್ಥಾನಿಗಳಾಗಿ ವಾಟ್ಸಾಫು ಫೇಸ್ಬುಕ್ಕುಗಳಲ್ಲಿ ತೋರಿಸಿ ಜನರನ್ನು ದಾರಿ ತಪ್ಪಿಸುವ ಕುಯುಕ್ತಿ ಮನಸ್ಸುಗಳಿಗೂ ಇಲ್ಲಿ ಬರಗಾಲವಿಲ್ಲ..ಇರಲಿ ಬಿಡಿ ಹೃದಯ ಮತ್ತು ಮನಸ್ಸುಗಳ ವೈಶಾಲ್ಯತೆ ಇಲ್ಲದವರಿಂದ ಒಳ್ಳೆಯದನ್ನು ನಿರೀಕ್ಷಿಸುವುದೇ ತಪ್ಪು. ಒಂದಂತೂ ಸತ್ಯ ಯಾವ ಕ್ರೀಡೆಯಲ್ಲಿ ಏನನ್ನು ಧರಿಸಬೇಕೋ ಅದನ್ನು ಧರಿಸಿದರೆ ಚೆನ್ನ. ಕ್ರೀಡೆಯನ್ನು ಅನವಶ್ಯಕವಾಗಿ ಧರ್ಮದ ಸುಳ್ಳು ನೆಲೆಯಲ್ಲಿ ಬಿಂಬಿಸುವುದೇ ಮೂರ್ಖತನ. ಇದೆಲ್ಲಾ ಪರೋಕ್ಷವಾಗಿಯಾದರೂ ಯಾಕೋ ಹೇಳಬೇಕು ಎನ್ನಿಸಿತು. ಇರಲಿ ಈ ಬಾರಿ ಅವಳ ಬಗೆಗೆ ಬರೆಯದೆ ಇರಲು ಸಾಧ್ಯವಾಗಲಿಲ್ಲ.
1964ರಲ್ಲಿ ಒಲಂಪಿಕ್ಸ್ ನಲ್ಲಿ ಆರು ಮಂದಿ ಪುರುಷ ಭಾರತೀಯ ಜಿಮ್ನಾಸ್ಟಿಕ್ಸ್ ಪಟುಗಳು ಭಾಗವಹಿಸಿದ್ದೇ ಕೊನೆ ಅದಾದ ಬಳಿಕ ಕಳೆದ 52 ವರುಷಗಳಲ್ಲಿ ನಡೆದ ಅಷ್ಟೂ ಒಲಂಪಿಕ್ಸ್ ಗಳಲ್ಲಿ ಭಾಗವಹಿಸುವ ಕನಿಷ್ಠ ಅರ್ಹತೆಯನ್ನು ಪಡೆಯಲು ಭಾರತೀಯ ಜಿಮ್ನಾಸ್ಟಿಕ್ಸ್ ಪಟುಗಳು ವಿಫಲರಾಗಿದ್ದರು. ಹಾಗೆ ನೋಡಿದರೆ 1952ರಲ್ಲಿ ಇಬ್ಬರು 1956ರಲ್ಲಿ ಮೂವರು ಮತ್ತು 1964ರಲ್ಲಿ ಆರು ಭಾರತೀಯ ಜಿಮ್ನಾಸ್ಟಿಕ್ಸ್ ಪಟುಗಳು ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸಿದ್ದೇ ಈ ವರೆಗಿನ ಮಹಾನ್ ಸಾಧನೆ. ಭಾರತೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್ ಮತ್ತೆ ಮತ್ತೆ ತನ್ನನ್ನು ಈ ಬಗೆಗೆ ವಿಮರ್ಶೆಗೊಳಪಡಿಸಿಕೊಳ್ಳಬೇಕಾದ ತುರ್ತು ಸಂದರ್ಭದಲ್ಲಿ ತ್ರಿಪುರಾ ರಾಜ್ಯದ ದೀಪಾ ಕರ್ಮಾಕರ್ ಎನ್ನೋ 22 ವರುಷದ ಹುಡುಗಿ ರಿಯೋ ಒಲಂಪಿಕ್ಸ್ ನಲ್ಲಿ ಭಾರತವನ್ನು ಜಿಮ್ನಾಸ್ಟಿಕ್ಸ್‌ನಲ್ಲಿ ಪ್ರತಿನಿಧಿಸಲು ಅರ್ಹತೆ ಪಡೆಯುವುದರ ಮುಖೇನ ಇಡೀ ಭಾರತವೇ ಹೆಮ್ಮೆಯಿಂದ ಜಿಮ್ನಾಸ್ಟಿಕ್ಸ್ ಕ್ಷೇತ್ರದತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿರುವುದು ಅಭಿನಂದನೀಯ.
ಹೌದು ದೀಪಾ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ನಲ್ಲಿ ಭಾರತವನ್ನು ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸುತ್ತಿರುವ ಪ್ರಥಮ ಮಹಿಳೆ. ಈ ಸಾಧನೆಯ ಹಿಂದೆ ಇರುವ ಪರಿಶ್ರಮ ಆಸಕ್ತಿ ನಿಜಕ್ಕೂ ಎಲ್ಲರಿಗೂ ಪ್ರೇರಣೆ ನೀಡುವಂತಾದ್ದು. ನಿಮಗೆ ಗೊತ್ತಿರಲಿ ಆಕೆ ಆರು ವರುಷದವಳಿದ್ದಾಗ ಪ್ರಥಮ ಬಾರಿ ಜಿಮ್ನಾಸ್ಟಿಕ್ಸ್ ತರಬೇತಿ ಪಡೆಯಲು ಹೋದಾಗ ಆಕೆಯ ಕೋಚ್ ವಿಶ್ವೇಶ್ವರ್ ನಂದಿ ಆಕೆಗೆ ತರಬೇತಿ ಕೊಡಲು ಅಕ್ಷರಶಃ ನಿರಾಕರಿಸಿದ್ದರು. ಕಾರಣ ಒಬ್ಬ ಜಿಮ್ನಾಸ್ಟಿಕ್ಸ್ ಪಟುವಿಗೆ ಇರಬೇಕಾದಂತಹ ಆಕೃತಿಯ ಪಾದಗಳು ದೀಪಾಳಿಗೆ ಇರಲಿಲ್ಲ.ಆದರೆ ದೀಪಾ ಬೆಂಬಿಡದ ಛಲಗಾತಿ.ಅದಮ್ಯ ಕನಸುಗಾತಿ. ಆಕೆಯ ಅಪ್ರತಿಮ ಆಸಕ್ತಿ ಗಮನಿಸಿದ ನಂದಿ ಅವಳನ್ನು ತರಬೇತಿಗೊಳಿಸಲು ಒಪ್ಪಿದರು. ಆ ಬಳಿಕ ನಡೆದದ್ದು ಇತಿಹಾಸ. ಈ ಹೊತ್ತು ಅವಳ ಎಲ್ಲಾ ಸಾಧನೆಗಳ ಹಿಂದೆ ನಂದಿಯವರ ಶ್ರಮವೂ ಗಣನೀಯ. 2011 ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಳ್ಳುವ ಮುಖೇನ ತನ್ನ ಸಾಮರ್ಥ್ಯವನ್ನು ಗೊತ್ತುಪಡಿಸಿದ ದೀಪಾ 2014ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮತ್ತು ೨೦೧೫ರಲ್ಲಿ ಹಿರೋಶಿಮಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗಳಿಸುವ ಮುಖೇನ ತನ್ನ ತಾಕತ್ತನ್ನು ವಿಶ್ವಕ್ಕೆ ಪರಿಚಯಿಸಿದರು.2016 ರಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಐದನೇ ಸ್ಥಾನ ಗಳಿಸಿದ ಹೆಮ್ಮೆ ಆಕೆಯದ್ದು.ಆಕೆ ಹಲವು ಭಾರತೀಯ ಪ್ರಥಮಗಳ ಒಡತಿಯೂ ಹೌದು.
ಆಗಸ್ಟ್ 9 1992 ರಂದು ತ್ರಿಪುರಾದ ಅಗರ್ತಲಾದಲ್ಲಿ ದುಲಾಲ್ ಮತ್ತು ಗೀತಾ ಕರ್ಮಾಕರ್ ದಂಪತಿಗಳ ಮಗಳಾಗಿ ಜನಿಸಿದ ದೀಪಾಳ ಜಿಮ್ನಾಸ್ಟಿಕ್ಸ್ ಬೆಳವಣಿಗೆಯಲ್ಲಿ ತಂದೆತಾಯಿಯರ ಪ್ರೋತ್ಸಾಹವೂ ಮರೆಯಲಾರದ್ದು. ಸೋಲುಗಳಿಗೆ ಧೃತಿಗೆಡದೆ ತುಟಿಗಳಲ್ಲಿ ಸದಾ ಮಿನುಗುವ ಸಣ್ಣ ನಗುಭರಿತ ಆತ್ಮವಿಶ್ವಾಸದೊಂದಿಗೆ ಸಾಧನೆಯ ಪಥದಲ್ಲಿ ಸಾಗುವ ದೀಪಾ ನಿಜವಾದ ಅರ್ಥದಲ್ಲಿ ಸಾಧಕರಿಗೊಂದು ಮಾಗದರ್ಶನವಾಗಬಲ್ಲ ದೀಪ. ಮುಂದಿನ ಆಗಸ್ಟ್‌ನಲ್ಲಿ ಬ್ರೆಜಿಲ್‌ನ ರಿಯೋ ಡಿ ಜನೈರೋನಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಿ ದೀಪಾ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಧಾರೆಯೆರೆದರೆ ಭಾರತೀಯ ಜಿಮ್ನಾಸ್ಟಿಕ್ಸ್‌ನಲ್ಲಿ ಪ್ರಥಮ ಪದಕದ ನಿರೀಕ್ಷೆಯ ಕನಸು ಕೈಗೂಡಲೂಬಹುದು.ಹಾಗಾದರೆ ಅದು ನಮ್ಮ ಪಾಲಿಗೆ ಅತ್ಯಂತ ದೊಡ್ಡ ಸಂಭ್ರಮದ ಕ್ಷಣ. ಅದೇನೇ ಇದ್ದರೂ ತನ್ನ ಅದ್ಭುತ ಸಾಧನೆಯ ಮೂಲಕ ಒಲಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡು ಸಮಸ್ತ ಭಾರತೀಯರ ಮನಗೆದ್ದಿರುವ ದೀಪಾ ಒಲಂಪಿಕ್ಸ್ ನಲ್ಲಿ ಪದಕ ಗೆದ್ದು ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಗುರುತಿಸಿಕೊಳ್ಳಲಿ ಎನ್ನುವುದು ಎಲ್ಲಾ ಭಾರತೀಯರ ಹಾರೈಕೆ.
ಕೊನೆ ಮಾತು : ಪೀಠಿಕೆಗೂ ಬರಹಕ್ಕೂ ಸಂಬಂಧವಿಲ್ಲ ಅಂತೇನಾದರೂ ಅನ್ನಿಸಿತಾ! ಖಂಡಿತಾ ಇದೆ. ಅರ್ಥಮಾಡಿಕೊಳ್ಳಬೇಕಾದವರಿಗೆ ಅರ್ಥವಾಗಿರುತ್ತೆ ಬಿಡಿ.