Kundapra.com ಕುಂದಾಪ್ರ ಡಾಟ್ ಕಾಂ

ಗಾಣಿಗ ಸೇವಾ ಸಂಘ ಉಪ್ಪುಂದ ಘಟಕದ ತೃತೀಯ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಮುದಾಯದ ಸಂಘಟನೆಗಳು ತಮ್ಮ ಸದಸ್ಯರಲ್ಲಿ ಧಾರ್ಮಿಕ ಹಾಗೂ ಸಂಘಟನಾ ಮನೋಧರ್ಮ ನಶಿಸದಂತೆ ಮಾಡಲು ಆಗಾಗ ಪೂರಕ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಬೇಕು. ಹಣ ಸಂಗ್ರಹಿಸಿ ಅದ್ದೂರಿಯ ಸಮಾರಂಭಗಳನ್ನು ಮಾಡುವುದರ ಬದಲಿಗೆ ಜನರನ್ನು ಒಗ್ಗೂಡಿಸುವ, ದುರ್ಬಲರ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಮಾಜಿ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಹೇಳಿದರು.

ಉಪ್ಪುಂದ ಸಮೃದ್ಧ್ ಸಭಾಭವನದಲ್ಲಿ ನಡೆದ ಉಪ್ಪುಂದ, ಬಿಜೂರು, ನಂದನವನ ಹಾಗೂ ಕೆರ್ಗಾಲ್ ಗ್ರಾಮ ವ್ಯಾಪ್ತಿಯ ಗಾಣಿಗ ಸೇವಾ ಸಂಘ ಉಪ್ಪುಂದ ಘಟಕದ ತೃತೀಯ
ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಮುದಾಯದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ
ಮಾತನಾಡಿದರು.
ಸಮಾಜದ ಒಳಿತಿಗಾಗಿ ಯೋಚಿಸಿ, ದೊರೆತ ಅವಕಾಶವನ್ನು ಒಳ್ಳೆಯ ಉದ್ದೇಶಕ್ಕಾಗಿ ಸದುಪಯೋಗ ಪಡಿಸಿಕೊಂಡು ಸತ್ಕಾರ್ಯಗಳನ್ನು ಮಾಡಬೇಕು ಎಂದು ಸಂಘದ ಸದಸ್ಯರಿಗೆ
ಸಲಹೆ ನೀಡಿದರು.

ಉಪ್ಪುಂದ ಘಟಕದ ಅಧ್ಯಕ್ಷ ಗಣಪಯ್ಯ ಗಾಣಿಗ ಅಧ್ಯಕ್ಷತೆವಹಿಸಿದ್ದರು. ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಮಹಾಬಲ ಗಾಣಿಗ, ಹಿರಿಯ ನಾಗರಿಕ ಮೊಗೇರಿ ನಾಗಮ್ಮ ಗಾಣಿಗ, ಯುವ
ಉದ್ಯಮಿ ಶಿವಾನಂದ ಗಾಣಿಗ, ನಾಟಿವೈದ್ಯ ನಾಗಯ್ಯ ಗಾಣಿಗ ಪೂಜಾರಡಿ ಇವರನ್ನು ಸನ್ಮಾನಿಸಲಾಯಿತು. ಸಮಾಜದ ವಿವಿಧ ದಾನಿಗಳ ನೆರವಿನಿಂದ 2016ರ ಎಸ್‌ಎಸ್‌ಎಲ್‌ಸಿ
ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಸಮುದಾಯದ ಎಲ್ಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ
ವಿತರಿಸಲಾಯಿತು.

ಘಟಕದ ಗೌರವಾಧ್ಯಕ್ಷ ಯು. ಅನಂತ ಗಾಣಿಗ, ಕೋಶಾಧಿಕಾರಿ ಗೋವಿಂದ ಗಾಣಿಗ, ಹಂಗಾರಕಟ್ಟೆ ಚೇತನಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ ಚಲ್ಲೆಮಕ್ಕಿ, ಬೆಂಗಳೂರಿನ
ಉದ್ಯಮಿ ಕೃಷ್ಣಮೂರ್ತಿ ಸಕ್ರೆಬೆಟ್ಟು, ಶಿವಮೊಗ್ಗ ಉದ್ಯಮಿ ರಾಮಚಂದ್ರ ಗಾಣಿಗ ಜಡ್ಡಿನಹಿತ್ಲು ಉಪಸ್ಥಿತರಿದ್ದರು. ಕಾರ್ಯದರ್ಶಿ ಆನಂದ ಗಾಣಿಗ ಪ್ರಾಸ್ತಾವಿಸಿ, ಬಾಬು ಗಾಣಿಗ
ಸ್ವಾಗತಿಸಿದರು. ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿ, ಗೋಪಾಲಕೃಷ್ಣ ಗಾಣಿಗ ವಂದಿಸಿದರು. ಬೆಳಿಗ್ಗೆ ಘಂಟೆ ೮ಕ್ಕೆ ಸಮಾಜ ಬಾಂಧವರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಪೂಜೆ
ನಡೆಯಿತು.

Exit mobile version