ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಭಾಗದ ಜನರು ನೆಮ್ಮದಿಯ ಜೀವನ ನಡೆಸುವಂತಾಗಬೇಕು, ಸಂಸ್ಕಾರಯುತ ಸಮಾಜ ನಿರ್ಮಾಣವಾಗಬೇಕೆಂಬ ನೆಲೆಯಲ್ಲಿ ಸರಕಾರ ಯೋಜನೆ
ರೂಪಿಸಿಕೊಳ್ಳುವ ಮೊದಲು ಖಾವಂದರು ಹಲವಾರು ಸಮಾಜಮುಖಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ಕ್ಷೇತ್ರದ ವತಿಯಿಂದ ಚಾಲನೆ ನೀಡುತ್ತಿದ್ದಾರೆ. ಇವರ ಎಲ್ಲಾ
ಕಾರ್ಯಗಳು ಇತಿಹಾಸ ಸೃಷ್ಠಿಸಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಖಂಬದಕೋಣೆ ನಿರ್ಮಲ ಸಭಾಭವನದಲ್ಲಿ ಖಂಬದಕೋಣೆ ವಲಯದ ಹೇರಂಜಾಲು, ಕಾಲ್ತೋಡು, ಖಂಬದಕೋಣೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಪದಗ್ರಹಣ ಸಮಾರಂಭ
ಉದ್ಘಾಟಿಸಿ ಮಾತನಾಡಿದರು.
ನಾವು ಪ್ರಕೃತಿಯ ಹಾಗೂ ಸಮಾಜದ ಋಣದಲ್ಲಿದ್ದೇವೆ. ಪ್ರಕೃತಿಯ ಉಳಿವಿನಲ್ಲಿ ನಮ್ಮೆಲ್ಲರ ಬದುಕಿದೆ. ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ. ಕುಡಿಯುವ ನೀರಿಗೂ ತಾತ್ವಾರ
ಬಂದೊದಗಿದೆ. ಹೀಗಾಗಿ ನೀರಿನ ಮಿತ ಬಳಕೆ, ಮಳೆಕೊಯ್ಲು, ನೀರು ಇಂಗಿಸುವಿಕೆ ಇಂತಹ ಅಗತ್ಯ ಕಾರ್ಯಕ್ರಮಗಳಿಂದ ಜನಜಾಗೃತಿ ಮೂಡಿಸುವ ಕೆಲಸ ಒಕ್ಕೂಟಗಳಿಂದಾಗಬೇಕಿದೆ.
ನಮ್ಮ ಪ್ರಗತಿ ಸಾಧನೆಗಾಗಿ ಕೃಷಿ, ಹೈನುಗಾರಿಕೆಯಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಬೇಕಾಗಿದೆ. ಇದರಿಂದ ಕುಟುಂಬದ ಆರ್ಥಿಕತೆ ಸಧೃಡವಾಗುವುದರೊಂದಿಗೆ ಶಿಸ್ತು ಹಾಗೂ
ಮೌಲ್ಯಾಧಾರಿತ ಸುಂದರ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಧ.ಗ್ರಾ.ಯೋ ಯೋಜನಾಧಿಕಾರಿ ಅಮರಪ್ರಸಾದ ಶೆಟ್ಟಿ ಮಾತನಾಡಿ, ಕಳೆದ ೩೪ ವರ್ಷಗಳಿಂದ ರಾಜ್ಯದ ೩೦ ಜಿಲ್ಲೆಗಳಲ್ಲಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ
ಶ್ರೀಕ್ಷೇತ್ರವು ವಿವಿಧ ರೀತಿಯಲ್ಲಿ ಸ್ಪಂದಿಸುತ್ತಿದೆ. ಸ್ವಸಹಾಯ ಸಂಘಗಳು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಲ್ಲ. ಸ್ವಾವಂಲಂಬಿ ಬದುಕು ನಡೆಸುವಂತಾಗಲು ಖಾವಂದರು
ಹಾಕಿಕೊಟ್ಟ ದಾರಿದೀಪ. ಇದು ಒರ್ವ ವ್ಯಕ್ತಿಗೆ ಸೀಮಿತವಾಗಿರದೇ ನೆಮ್ಮದಿಯ ಬದುಕಿನ ಕೂಡುವಿಕೆಯ ಕುಟುಂಬದ ಕಾರ್ಯಕ್ರಮವಾಗಿದೆ. ಗ್ರಾಮದ ಅಭಿವೃದ್ಧಿಯಲ್ಲಿ ತನ್ನದು ಕೂಡಾ
ಪಾಲಿದೆ ಎಂಬ ಭಾವನೆ ಎಲ್ಲರಲ್ಲಿಯೂ ಬಂದಾಗ ಮಾತ್ರ ಈ ಯೋಜನೆಯ ಉದ್ದೇಶ ಈಡೇರಿದಂತೆ ಎಂದರು.
ಖಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ನೂತನ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಗ್ರಾಪಂ ಸದಸ್ಯ ಗುರುರಾಜ
ಹೆಬ್ಬಾರ್, ಧಗ್ರಾಯೋ ಕೇಂದ್ರ ಸಮಿತಿ ಹಾಗೂ ವಲಯಾಧ್ಯಕ್ಷ ಚಂದ್ರಶೇಖರ ಉಪಸ್ಥಿತರಿದ್ದರು. ಕಾಲ್ತೋಡು ಸೇವಾಪ್ರತಿನಿಧಿ ಶೋಭಾ ಸ್ವಾಗತಿಸಿ, ಹೇರಂಜಾಲು ಸೇವಾಪ್ರತಿನಿಧಿ ಆಶಾ
ವಂದಿಸಿದರು. ಸಂದೀಪ್ ನಿರೂಪಿಸಿದರು.