ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಪ್ರದೇಶದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಐದು ವರ್ಷಗಳ ಮುನ್ನೋಟದಿಂದ ಕೂಡಿದ ‘ನಮ್ಮ ಗ್ರಾಮ ನಮ್ಮ ಯೋಜನೆ’
ರೂಪಿಸಲು ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಸರಕಾರ ನಿರ್ದೇಶನ ನೀಡಿದೆ. ಎಲ್ಲೆಡೆ ಈಗ ಅದರ ಪ್ರಕ್ರಿಯೆ ಆರಂಭವಾಗಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಈ ನಿಟ್ಟಿನಲ್ಲಿ
ವಿಶೇಷ ಆಸಕ್ತಿ ತಾಳಿದೆ. ಕುಂದಾಪುರ ತಾಲೂಕಿನ ಪಡುವರಿ, ಹಳ್ಳಿಹೊಳೆ, ಸಿದ್ದಾಪುರ, ಕುಂಭಾಶಿ, ವಂಡ್ಸೆ, ಕರ್ಕುಂಜೆ ಗ್ರಾಮ ಪಂಚಾಯತ್‌ಗಳು ಗ್ರಾಮ ಪಂಚಾಯತ್ ಹಕ್ಕೊತ್ತಾಯ
ಆಂದೋಲನ ಮತ್ತು ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಬೆಂಬಲದೊಂದಿಗೆ ಮಾದರಿ ಪಂಚ ವಾರ್ಷಿಕ ಯೋಜನೆ ರೂಪಿಸುವ ಕೆಲಸಕ್ಕೆ ಚಾಲನೆ ನೀಡಿದ್ದು ಜಿಲ್ಲಾ
ಪಂಚಾಯತ್ ಅದಕ್ಕೆ ಎಲ್ಲ ವಿಧದ ಸಹಕಾರ ನೀಡುತ್ತಿದೆ.
ಆರು ಗ್ರಾಮ ಪಂಚಾಯತ್‌ಗಳು ಈಗಾಗಲೆ ಪೂರ್ವಭಾವಿ ಸಭೆಗಳನ್ನು ನಡೆಸಿ, ಆರಂಭಿಕ ಪ್ರಕ್ರಿಯೆಗಳಿಗಾಗಿ ಕಾರ್ಯತಂಡಗಳನ್ನು ರಚಿಸಿಕೊಂಡಿವೆ. ಈ ತಂಡಗಳು ಗ್ರಾಮದ ಪ್ರಸಕ್ತ
ಸ್ಥಿತಿಗತಿ ಅಧ್ಯಯನ, ಮಾಹಿತಿ ಸಂಗ್ರಹದಲ್ಲಿ ನಿರತವಾಗಿವೆ.
ಈ ಯೋಜನೆ ಗರಿಷ್ಠ ಜನಸಹಭಾಗಿತ್ವದ ಮೂಲಕ ರೂಪುಗೊಳ್ಳಬೇಕಾಗಿದೆ. ಜನವಸತಿ ಸಭೆ, ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ ಜನರಿಂದ ಯೋಜನೆಯ ಪ್ರಸ್ತಾವನೆಗಳನ್ನು ಸ್ವೀಕರಿಸಿ,
ಅವುಗಳೊಂದಿಗೆ ವಿವಿಧ ಇಲಾಖೆಗಳ ಅಧೀನದ ಕಾರ್ಯಕ್ರಮಗಳನ್ನೂ ಸೇರಿಸಿಕೊಂಡು ಯೋಜನೆಗೆ ಅಂತಿಮ ರೂಪ ನೀಡಲಾಗುತ್ತದೆ. ಮುಂದೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್
ಯೋಜನೆಗೆ ‘ನಮ್ಮ ಗ್ರಾಮ ನಮ್ಮ ಯೋಜನೆ’ ಆಧಾರವಾಗುವುದರಿಂದ ಯೋಜನೆ ಪ್ರಕ್ರಿಯೆಯಲ್ಲಿ ಅವುಗಳ ಸದಸ್ಯರೂ ಸೇರಿಕೊಳ್ಳಲಿದ್ದಾರೆ.
ಅಭಿವೃದ್ಧಿಯನ್ನು ಮಾನವ ಅಭಿವೃದ್ಧಿಯ ನೆಲೆಯಲ್ಲಿ ಅಳೆಯುವ ಕ್ರಮ ಚಾಲ್ತಿಯಲ್ಲಿರುವುದರಿಂದ ಆರು ಗ್ರಾಮ ಪಂಚಾಯತ್‌ಗಳು ರೂಪಿಸುವ ಯೋಜನೆಯನ್ನು ಆಯಾ ಗ್ರಾಮ
ಪಂಚಾಯತ್‌ಗಳ ಮಾನವ ಅಭಿವೃದ್ಧಿ ಗುರಿಸಾಧನೆಗೆ ಪೂರಕವಾಗುವಂತೆ ರೂಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ
ಫ್ರಾನ್ಸಿಸ್ ಮತ್ತು ಯೋಜನಾಧಿಕಾರಿ ಶ್ರೀನಿವಾಸ ರಾವ್ ನೀಡಿದ ಸಲಹೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ. ಆ ಮೂಲಕ ಈ ಆರು ಗ್ರಾಮ ಪಂಚಾಯತ್‌ಗಳ
ಯೋಜನೆಗಳು ವಿಶಿಷ್ಟವಾಗಿ, ಅನುಕರಣೀಯವಾಗಿ ರೂಪುಗೊಳ್ಳಲಿವೆ ಎಂದು ಹಕ್ಕೊತ್ತಾಯ ಆಂದೋಲನದ ರಾಜ್ಯ ಸಂಚಾಲಕ ಬಿ. ದಾಮೋದರ ಆಚಾರ್ಯ ಮತ್ತು ತಾಲೂಕು
ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಭರವಸೆ ತಾಳಿದ್ದಾರೆ.