Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ : ಕರ್ನಾಟಕ ಪ್ರಾಂತ ರೈತ ಸಂಘದ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಖಿಲ ಭಾರತ ಕಿಶಾನ್‌ಸಭಾಕ್ಕೆ ಸಂಯೋಜಿಸಲ್ಪಟ್ಟ ಕರ್ನಾಟಕ ಪ್ರಾಂತ ರೈತ ಸಂಘದ ಕುಂದಾಪುರ ತಾಲೂಕು ಸಂಘಟನಾ ಸಮಿತಿ ನೇತೃತ್ವದಲ್ಲಿ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕುಂದಾಪುರ ಸಹಾಯಕ ಕಮಿಷನರ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರಾಜ್ಯವ್ಯಾಪಿ ಜರುಗುವ ಪ್ರತಿಭಟನಾ ಹೋರಾಟ ಕಾರ್ಯಕ್ರಮದ ಅಂಗವಾಗಿ ರೈತರ ಪ್ರಮುಖ ಬೇಡಿಕೆಗಳಾದ – ತೆಂಗು, ರಬ್ಬರ್, ಮತ್ತು ಅಡಿಕೆ ಬೆಳೆಗಾರರನ್ನು ರಕ್ಷಿಸಿ, ಬೆಳೆಗೆ ಬೆಲೆ ಹೆಚ್ಚಳ ಮಾಡಬೇಕು. ನಮೂನೆ 50 ಮತ್ತು 53 ರಲ್ಲಿ ಅಕ್ರಮ ಸಕ್ರಮಿಕರಣ ಕೋರಿ ಅರ್ಜಿ ಸಲ್ಲಿಸಿದ ಬಡ ರೈತರಿಗೆ ಕೂಡಲೇ ಭೂಮಿ ಮಂಜೂರಾತಿ ಹಕ್ಕು ಪತ್ರ ನೀಡಬೇಕು. ಕುಂದಾಪುರ ತಾಲೂಕಿನ ರಬ್ಬರ್ ಮತ್ತು ಅಡಿಕೆ ಕೃಷಿಕರು ಸಾಲ ಬಾಧೆಯಿಂದ ೫ ಮಂದಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರ ಧನ ಮಂಜೂರು ಮಾಡಬೇಕು. ಮಧ್ಯವರ್ತಿ ಶ್ರೀಮಂತ ವ್ಯಾಪಾರಸ್ತರ ಲಾಭಕೋರ ನೀತಿಯನ್ನು ತಡೆಗಟ್ಟಬೇಕು. ಇತ್ಯಾದಿ ಬೇಡಿಕೆಗಳ ಮನವಿಯನ್ನು ಸಹಾಯಕ ಕಮಿಷನ್‌ರವರಿಗೆ ಹಸ್ತಾಂತರಿಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಕೆ.ಶಂಕರ್, ಯು. ದಾಸ ಭಂಡಾರಿ, ಮಹಾಬಲ ವಡೇರ ಹೋಬಳಿ, ಹೆಚ್. ನರಸಿಂಹ, ಸುರೇಶ ಕಲ್ಲಾಗರ, ಲಯನ್ಸ್ ರೆಬೋಲ್ಲೋ, ಗೋಪಾಲ ಶೆಟ್ಟಿಗಾರ, ಬೋಜ ಶೆಟ್ಟಿಗಾರ ಉಪಸ್ಥಿತರಿದ್ದರು. ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಕಟೇಶ ಕೋಣಿ ಕಾರ್ಯಕ್ರಮ ನಿರೂಪಿಸಿದರು. ಮಹಾಬಲ ವಡೇರ ಹೋಬಳಿ ಕೊನೆಯಲ್ಲಿ ವಂದಿಸಿದರು. ಸಹಾಯಕ ಕಮಿಷನರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.

Exit mobile version