Kundapra.com ಕುಂದಾಪ್ರ ಡಾಟ್ ಕಾಂ

ಹಿಂದಿನ ಆಶಯಗಳನ್ನು ಸಾಕಾರಗೊಳಿಸುವಲ್ಲಿ ರಾಜಕಾರಣಿಗಳು ವಿಫಲ: ಸಂತೋಷ್ ಹೆಗ್ಡೆ

ಅಮಾಸೆಬೈಲಿನಲ್ಲಿ ಬೃಹತ್ ಸೋಲಾರ್ ದೀಪ ಅಳವಡಿಕೆ ಯೋಜನೆಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಮಾಸೆಬೈಲು: ಅಮಾಸೆಬೈಲು ಚಾರೀಟೆಬಲ್ ಟ್ರಸ್ಟ್, ಶ್ರೀ ಕ್ಷೇತ್ರ.ಧರ್ಮಸ್ಥಳ ಗಾಮಾಭೀವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಮಾಸೆಬೈಲು ಅಭಿವೃದ್ಧಿ ಹೊಂದಿದೆ. ಇಲ್ಲಿನ ಮನೆಗಳಿಗೆ ಸೋಲಾರ್ ದೀಪಗಳ ಅಳವಡಿಕೆಯ ಮೂಲಕ ರಾಜ್ಯದಲ್ಲಿ ಪ್ರಪ್ರಥಮ ಸಂಪೂರ್ಣ ಸೋಲಾರ್ ಗ್ರಾಮದ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವುದು ಪ್ರಶಂಸನೀಯ ಎಂದು ನಿವೃತ್ತ ನ್ಯಾಯಾಧೀಶ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾ ಸಂತೋಷ ಹೆಗ್ಡೆ ಹೇಳಿದರು.

ಅವರು ಅಮಾಸೆಬೈಲು ಪೇಟೆ ವೃತ್ತದಲ್ಲಿ ಮಚ್ಚಟ್ಟು ಕೃಷ್ಣರಾಯ ಕೊಡ್ಗಿ ಸ್ಮರಣಾರ್ಥ ಅಮಾಸೆಬೈಲು ಚಾರೀಟೆಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ರೂ. ಒಂದು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ದೀಪವನ್ನು ಬುಧವಾರ ಲೋಕಾರ್ಪಣೆಗೊಳಿಸಿ, ನಂತರ ಸ್ಥಳೀಯ ಪ್ರೌಢ ಶಾಲೆ ಆವರಣದಲ್ಲಿ ಗ್ರಾಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯಾ ನಂತರ ನಮ್ಮ ಹಿಂದಿನವರ ಚಿಂತನೆಗಳನ್ನು ಸಾಕಾಕಾರಗೊಳಿಸುವಲ್ಲಿ ಇಂದಿನ ರಾಜಕಾರಣಿಗಳಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹಿರಿಯರ ವಿಚಾರಧಾರೆ ಮೌಲ್ಯಗಳು ಕುಸಿಯುತ್ತಿವೆ. ಇವರಲ್ಲಿ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿತ್ವವಿಲ್ಲ. ಜನರಿಂದ, ಜನರಿಗಾಗಿ, ಜನರಿಗೊಸ್ಕರ ಇರುವ ಪ್ರಜಾಭುತ್ವವನ್ನು ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಎಂಬ ಸ್ಥಿತಿಗೆ ತಂದಿದ್ದಾರೆ. ದೇಶದ ಪ್ರತಿಯೊಂದು ಇಲಾಖೆಗಳಲ್ಲಿ ಭೃಷ್ಟಾಚಾರ ತಾಂಡವವಾಡುತ್ತಿದೆ. ಉನ್ನತ ಹುದ್ದೆಯಲ್ಲಿರುವವರಿಗೆ ರಾಜಕಾರಣಿಗಳು ರಕ್ಷಣೆ ಮಾಡುವ ಮೂಲಕ ಅವರ ತಪ್ಪುಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಭ್ರ್ರಷ್ಟಚಾರದಲ್ಲಿ ತೊಡಗಿಸಿಕೊಂಡವರನ್ನು ಸ್ವಜಾತಿ ವ್ಯಾಮೋಹದಿಂದ ರಕ್ಷಣೆ ಮಾಡುತ್ತಿರುವುದು ದೊಡ್ಡ ಅಪರಾಧ. ಲಂಚ ನೀಡಿ ಉದ್ಯೋಗ ಪಡೆಯುವುದು ಮತ್ತಷ್ಟು ಭ್ರಷ್ಟಚಾರಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಸಾಮಾನ್ಯ ಜನರ ಬಗ್ಗೆ ಇವರಿಗೆ ಕಾಳಜಿಯಿಲ್ಲ. ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಪ್ರಜಾಪ್ರಭುತ್ವವಲ್ಲ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ ಹೆಗ್ಡೆ, ಇಂದಿನ ಯುವಜನರು ಸಮಾಜ ಹಾಗೂ ದೇಶವನ್ನು ರಕ್ಷಿಸುವಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ. ರಾಜಕೀಯವನ್ನು ಸ್ವಾರ್ಥಕ್ಕಾಗಿ ತೊಡಗಿಸಿಕೊಳ್ಳುವವರನ್ನು ಆಯ್ಕೆಗೊಳಿಸಬಾರದು. ಪ್ರಾಮಾಣಿಕರಾಗಿರುವ ವ್ಯಕ್ತಿಯನ್ನು ನಮ್ಮ ಪ್ರತಿನಿಧಿಯಾಗಿ ನೇಮಿಸಬೇಕಾಗಿದೆ. ಇದಕ್ಕಾಗಿ ದೇಶದ ಸೇವಕನಾಗಲು ಯುವಕರು ರಾಜಕೀಯಕ್ಕೆ ಬರಬೇಕಿದೆ. ದೇಶ ಅಭಿವೃದ್ಧಿಯಾದರೂ, ಅಭಿವೃದ್ಧಿ ಹೊಂದಬೇಕಾದ ಇನ್ನಷ್ಟು ಕಾರ್ಯಗಳು ನಡೆಯಬೇಕಾದ ಅವಶ್ಯತೆಯಿದೆ. ಅದು ನಿಮ್ಮಿಂದ ಆಗಬೇಕಿದೆ. ವಿದ್ಯಾರ್ಥಿಗಳು, ಯುವಜನತೆ ಉತ್ತಮ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯಕ್ಕಾಗಿ ಪಣತೊಡಬೇಕು ಎಂದರು.

ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ 1800 ಮನೆಗಳಲ್ಲಿ 1452 ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲಾಗುತ್ತಿದೆ. ರಾಜ್ಯದಲ್ಲೇ ಪ್ರಪ್ರಥಮವಾಗಿ ಗ್ರಾಮವನ್ನು ಸಂಪೂರ್ಣ ಸೋಲಾರ್ ಗ್ರಾಮವಾಗಿ ರೂಪಿಸುವ ಗುರಿ ಹೊಂದಲಾಗಿದೆ. ಸೆಲ್ಕೋ ಸೋಲಾರ್ ಸಂಸ್ಥೆ ಇ_ಟೆಂಡರ್ ಮೂಲಕ ಸೋಲಾರ್ ದೀಪಗಳನ್ನು ಅಳವಡಿಸುವ ಗುತ್ತಿಗೆ ಪಡೆದಿದ್ದು, 5 ವರ್ಷಗಳ ನಿರ್ವಹಣೆ ಮಾಡಲಿದೆ. ಇದರಿಂದ ವಿದ್ಯುತ್ ಹಾಗೂ ಪ್ರತಿ ಮನೆಯಲ್ಲಿಯೂ ಪರ್ಯಾಯ ಬೆಳಕು ಲಭಿಸಲಿದೆ. ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸಲು ಯೋಜನೆಗಳನ್ನು ರೂಪಿಸಿದೆ. ಎಲ್ಲಾ ಕುಟುಂಬಗಳಿಗೆ ಪಕ್ಕಾಮನೆ, ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಬಿ.ಪಿ.ಎಲ್ ಕುಟುಂಬಗಳಿಗೆ ಆರೋಗ್ಯ ರಕ್ಷಣೆ, ಎಲ್ಲಾ ಮಕ್ಕಳಿಗೆ ಪ್ರಾಥಮಿಕ,ಪ್ರೌಢ ಶಿಕ್ಷಣ, ಅನಕ್ಷಸ್ಥರಿಗೆ ಶಿಕ್ಷಣ, ಎಲ್ಲಾ ಕುಟುಂಬಗಳಿಗೆ ವಿಮಾ ಸೌಲಭ್ಯ, ಅರ್ಹ ಫಲಾನುಭವಿಗಳಿಗೆ ಉದ್ಯೋಗ ಇವುಗಳು ಯೋಜನೆಯ ಪ್ರಮುಖ ಅಂಶಗಳು ಎಂದರು.

ಶ್ರೀ ಕ್ಷೇತ್ರ.ಧರ್ಮಸ್ಥಳ.ಗಾಮಾಭೀವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ ಅಧ್ಯಕ್ಷತೆವಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ನೂತನವಾಗಿ ನಿರ್ಮಿಸಿದ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ, ಕೃಷಿ ಮಾರುಕಟ್ಟೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ಭಾರತೀಯ ವಿಕಾಸ ಟ್ರಸ್ಟ್ ಅಧ್ಯಕ್ಷ ಕೆ.ಎಂ ಉಡುಪ ಅವರು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ದಿ. ಕೃಷ್ಣರಾಯ ಕೊಡ್ಗಿ ಸ್ಮರಣಾರ್ಥ ಕೊಡಮಾಡಿದ ಪ್ರೋತ್ಸಾಹಧನ ಮತ್ತು ರೂ.೭೫ ಸಾವಿರ ಮೌಲ್ಯದ ನೋಟ್ ಪುಸ್ತಕಗಳನ್ನು ವಿತರಿಸಿದರು. ಕರ್ಣಾಟಕ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜಯರಾಮ ಭಟ್ ಪ್ರೌಢ ಶಾಲೆಯಲ್ಲಿ ಬ್ಯಾಂಕ್ ಪ್ರಾಯೋಜಿತ ನೂತನ ಶೌಚಾಲಯಗಳನ್ನು ಉದ್ಘಾಟಿಸಿದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಿರಿಯಣ್ಣ, ವ್ಯವಸ್ಥಾಪಕ ನಿರ್ದೇಶಕ ವಿ. ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ಉಪಾಧ್ಯಕ್ಷ ಪ್ರವೀಣ ಕುಮಾರ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಪೂಜಾರ‍್ತಿ, ಅಮಾಸೆಬೈಲು ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಡ್ತಿ, ಅಮಾಸೆಬೈಲು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ತಿಮ್ಮಪ್ಪ, ಉಳ್ಳೂರು-ಮಚ್ಚಟ್ಟು ವ್ಯ. ಸೇ. ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ. ಚಂದ್ರಶೇಖರ ಶೆಟ್ಟಿ, ಅಮಾಸೆಬೈಲು ವ್ಯ. ಸೇ. ಸಹಕಾರಿ, ಬ್ಯಾಂಕ್ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಉಪಸ್ಥಿರಿದ್ದರು. ಸತ್ಯನಾರಾಯಣ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ, ಅಮಾಸೆಬೈಲು ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ವಂದಿಸಿದರು.

Exit mobile version