Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಬಾರಂದಾಡಿ: ಮಧ್ಯವಯಸ್ಕ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ, ಮೇ5: ತಾಲೂಕಿನ ಕುಂದಬಾರಂದಾಡಿಯಲ್ಲಿನ ಬಾರ್ ಸಮೀಪ ಇರುವ ಆವರಣವಿಲ್ಲದ ಬಾವಿಗೆ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದ್ದು, ಮೃತರನ್ನು ಹಕ್ಲಾಡಿ ಮೇಲ್ಬೆಟ್ಟು ನಿವಾಸಿ ಕುಷ್ಠ ಪೂಜಾರಿ (48) ಎಂದು ಗುರುತಿಸಲಾಗಿದೆ.

ಕುಡಿದು ಬಿದ್ದಿರಬಹುದೇ?

ಕುಂದಬಾರಂದಾಡಿಯ ಬಾರ್ ಗೆ ತೆರಳಿದ್ದ ಕುಷ್ಠ ಪೂಜಾರಿ ಅಲ್ಲಿಯೇ ಸಮೀಪದಲ್ಲಿದ್ದ ಅಂಗಡಿಗೆ ಬಂದಿದ್ದರೆನ್ನಲಾಗಿದೆ.ಬಳಿಕ ಅಂಗಡಿಯ ಬಳಿಯೇ ಇದ್ದ ಆವರಣವಿಲ್ಲದ ಬಾವಿಗೆ ಸಮೀಪ ತೆರಳಿದ್ದ ಅವರು ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸಮೀಪದ ಮನೆಯವರಿಗೆ ಸೇರಿದ ಬಾವಿಯಲ್ಲಿ ನೀರಿಲ್ಲದೇ ಇದ್ದುದರಿಂದ ಯಾರೊಬ್ಬರೂ ಅದರತ್ತ ತೆರಳಿರಲಿಲ್ಲ.  ಮಳೆಗಾಲ ಆರಂಭಗೊಂಡದ್ದರಿಂದ ಮಳೆ ನೀರಿನೊಂದಿಗೆ ಮಣ್ಣು ಬಾವಿಗೆ ಬೀಳುತ್ತದೆಂಬ ಕಾರಣಕ್ಕೆ ದಂಡೆ ಕಟ್ಟಲು ತೆರಳಿದ್ದ ಮನೆಯ ಹೆಂಗಸೊಬ್ಬರು ಬಾವಿ ಇಣುಕಿ ನೋಡಿದಾಗ ವ್ಯಕ್ತಿಯೋರ್ವರು ಬಿದ್ದಿರುವುದು ಪತ್ತೆಯಾಗಿತ್ತು. ಮೃತ ದೇಹವನ್ನು ಮೇಲಕ್ಕೆತ್ತಲಾಗಿದ್ದು ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ಕೊಂಡೊಯ್ಯಲಾಗಿದೆ. ಮೃತದೇಹದಿಂದ ವಾಸನೆ ಬರುತ್ತಿರುವುದರಿಂದ ಒಂದು ದಿನದ ಹಿಂದೆಯೇ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/.

Exit mobile version