Kundapra.com ಕುಂದಾಪ್ರ ಡಾಟ್ ಕಾಂ

ಸ್ಥಳೀಯ ಪತ್ರಿಕೆಯಲ್ಲಿ ನಿರಂತರವಾಗಿ ವ್ಯಕ್ತಿಯೋರ್ವರ ತೇಜೋವಧೆ ಖಂಡಿಸಿ ಪೊಲೀಸ್ ಠಾಣೆಗೆ ಮುತ್ತಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ಥಳೀಯ ಪತ್ರಿಕೆಯೊಂದರಲ್ಲಿ ಅಕ್ಷತಾ ದೇವಾಡಿಗ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಾಕ್ಷಾಧಾರಗಳಿಲ್ಲದೆ ನಿರಂತರವಾಗಿ ವ್ಯಕ್ತಿಯೋರ್ವರ ಮಾನಹಾನಿ ಮಾಡಲಾಗುತ್ತಿರುವುದನ್ನು ಖಂಡಿಸಿ ಬೈಂದೂರು ಹೊಬಳಿಯ ಸಾರ್ವಜನಿಕರು ಬೈಂದೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಗೌರಿ ದೇವಾಡಿಗ ಮಾತನಾಡಿ, ಅಕ್ಷತಾ ದೇವಾಡಿಗಳ ಕೊಲೆಯ ಕುರಿತಾಗಿ ಪತ್ರಿಕೆಯೊಂದರಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ನಿರಂತವಾಗಿ ಮಾಡುತ್ತಾ ತೇಜೋವಧೆ ಮಾಡಿರುವುದಲ್ಲದೇ ಅಕ್ಷತಾಳ ಕುಟುಂಬಕ್ಕೂ ಮತ್ತೆ ಕರಾಳ ದಿನವನ್ನು ನೆನಪಿಸುವಂತೆ ಮಾಡಲಾಗುತ್ತಿದೆ. ಇಂತಹ ಘಟನೆಗಳು ಸಮುದಾಯಗಳ ನಡುವೆ ಸಂಘರ್ಷವನ್ನು ಹುಟ್ಟುಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸಲು ದಾರಿಮಾಡಿಕೊಡುತ್ತವೆ ಎಂದರು. ಕುಂದಾಪ್ರ ಡಾಟ್ ಕಾಂ ವರದಿ

ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ ಅಕ್ಷತಾ ದೇವಾಡಿಗ ಪ್ರಕರಣವನ್ನು ಸ್ವತಃ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಅವರೇ ಕೈಗೆತ್ತಿಕೊಂಡು ತನಿಕೆ ನಡೆಸಿ ನೈಜ ಆರೋಪಿಯನ್ನು ಬಂಧಿಸಿದ್ದಾರೆ. ಆದಾಗ್ಯೂ ಇನ್ನೂ ಕೆಲವು ಆರೋಪಿಗಳನ್ನು ರಕ್ಷಿಸಲಾಗಿದೆ ಎಂದು ಹೇಳಿ ನಿರಂತರವಾಗಿ ಪತ್ರಿಕೆಯಲ್ಲಿ ಬರೆದು ಸಮಾಜಕ್ಕೂ ತಪ್ಪು ಸಂದೇಶವನ್ನು ನೀಡಲಾಗುತ್ತಿದೆ. ನೈಜ ಆರೋಪಿಯನ್ನು ಬಂಧಿಸಿಲ್ಲ ಎನ್ನುವವರು ಆ ಆರೋಪಿ ಯಾರು ಎಂಬುದನ್ನು ವರದಿ ಮಾಡಲಿ. ಆದರೆ ಊಹಾಪೋಹಗಳನ್ನು ಎಬ್ಬಿಸಿ, ತೇಜೋವಧೆ ಮಾಡುತ್ತಿರುವುದಲ್ಲದೇ, ಜನರ ದಾರಿ ತಪ್ಪಿಸುವ ಕೆಲಸ ಉತ್ತಮ ಬೆಳವಣಿಗೆಯಲ್ಲ. ಪ್ರಕರಣದ ಬಗ್ಗೆ ಸ್ವಷ್ಟ ಅರಿವಿರುವ ಪೊಲೀಸರು ಸುಳ್ಳು ವರದಿ ಪ್ರಕಟಗೊಂಡಾಗಲೂ ಕ್ರಮಕೈಗೊಳ್ಳದಿರುವುದು ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡದಂತಾಗಿದೆ. ಸಮಾಜದ ಗೌರವಯುತ ಸ್ಥಾನದಲ್ಲಿರುವವರ ಮಾನಹರಣಕ್ಕೆ ಮುಂದಾಗಿ, ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ಬೇಸರ ತರಿಸಿದೆ ಎಂದರು.

ಸಾರ್ವಜನಿಕರ ಮನವಿ ಸ್ವೀಕರಿಸಿದ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಪ್ರತಿಕ್ರಿಯಿಸಿ ಅಕ್ಷತಾ ದೇವಾಡಿಗ ಕೊಲೆ ಪ್ರಕರಣದಲ್ಲಿ ಎಸ್ಪಿ ಅವರೇ ನೇರವಾಗಿ ತನಿಕೆ ನಡೆಸಿದ್ದು, ಇದರಲ್ಲಿ ಯಾವುದೇ ರಾಜಕೀಯ ಒತ್ತಡವೂ ಇರಲಿಲ್ಲ. ರಾಜಕೀಯ ವ್ಯಕ್ತಿಗಳು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ್ದಾರೆನ್ನುವುದರಲ್ಲಿ ಹುರುಳಿಲ್ಲ. ಪತ್ರಿಕೆಯೊಂದರಲ್ಲಿ ಸುಳ್ಳು ಆರೋಪ ಮಾಡಿರುವು ಬಗ್ಗೆ ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರ ಸಲ್ಲಿಸಿಯಾಗಿದ್ದು, ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿರುವ ಕ್ರಮಕೈಗೊಳ್ಳುವುದಾಗಿ ಭರವಸೆಯಿತ್ತರು.

ವಕೀಲ ಪ್ರಸನ್ನ ಕುಮಾರ್, ಜಿಪಂ ಮಾಜಿ ಸದಸ್ಯ ಮದನ್‌ಕುಮಾರ್ ಮೊದಲಾದವರು ಮಾತನಾಡಿದರು. ಬೈಂದೂರು ಯಡ್ತರೆ ಗ್ರಾಮಸ್ಥರು ಡಿವೈಎಸ್ಪಿ ಮಂಜುನಾಥ ಶೆಟ್ಟಿ ಅವರ ಮೂಲಕ ಎಸ್ಪಿಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ, ವಿಜಯ ಶೆಟ್ಟಿ, ಗ್ರೀಷ್ಮಾ ಬೀಡೆ, ಮಾಜಿ ತಾಪಂ ಸದಸ್ಯರಾದ ಪ್ರದೀಪಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯ ರಘುರಾಮ ಶೆಟ್ಟಿ, ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಬೈಂದೂರು ಗ್ರಾಪಂ ಅಧ್ಯಕ್ಷ ಜನಾರ್ಧನ ಯು., ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ ಕೊಲ್ಲೂರು, ಕಾರ್ಯದರ್ಶಿ ನಾಗರಾಜ ಗಾಣಿಗ, ವಿನಾಯಕ ರಾವ್, ಸತೀಶ್ ಕೆ.ವಿ ಸೇರಿದಂತೆ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು. /ಕುಂದಾಪ್ರ ಡಾಟ್ ಕಾಂ ವರದಿ/

Exit mobile version