ಹೈಕೋರ್ಟ್ ತಡೆಯಾಜ್ಞೆ ತೆರವಾದರೂ ಶ್ರೀಗಳನ್ನು ಪೂಜೆಗೆ ಆಹ್ವಾನಿಸದ ಜಿಲ್ಲಾಧಿಕಾರಿ
ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಜನ್ಮಾಷ್ಠಮಿಯಂದು ವಾಡಿಕೆಯಂತೆ ರಾಮಚಂದ್ರಪುರ ಮಠಾಧೀಶ ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಂದ ನಡೆಯಬೇಕಿದ್ದ ವಿಶೇಷ ಪೂಜೆ ಹಾಗೂ ಕುಂಭಾಭಿಷೇಕ ಅವರ ಅನುಪಸ್ಥಿತಿಯಲ್ಲಿ ಎರಡನೇ ವರ್ಷವೂ ನೆರವೇರಿದೆ. ದೇವಿಗೆ ಪೂಜೆ ನಡೆಸಲು ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಮಧ್ಯಂತರ ಆದೇಶ ನೀಡಿದ ಹೊರತಾಗಿಯೂ ಶ್ರೀಗಳನ್ನು ದೇವಳಕ್ಕೆ ಆಹ್ವಾನಿಸದೇ ಜಾರಿಕೊಂಡಿರುವ ಜಿಲ್ಲಾಡಳಿತ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2006ರಿಂದ ಶ್ರೀಗಳಿಂದ ದೇವರಿಗೆ ವಿಶೇಷ ಪೂಜೆ, ಕುಂಭಾಭಿಷೇಕ ನಡೆಯುತ್ತಿತ್ತು. ಆದರೆ ರಾಘವೇಶ್ವರ ಸ್ವಾಮೀಜಿಯ ಮೆಲೆ ಕಳಂಕ ಎದುರಾಗಿದ್ದರಿಂದ ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ವಿಶೇಷ ಶ್ರೀಗಳಿಂದ ಪೂಜೆ ನಡೆಸಲು ತಡೆಯೊಡ್ಡಿದ್ದರು. ಇದನ್ನು ಪ್ರಶ್ನಿಸಿ ಕೊಲ್ಲೂರು ದೇವಸ್ಥಾನದ ಪ್ರಧಾನ ಅರ್ಚಕರಾದ ನರಸಿಂಹ ಅಡಿಗ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ಅವರ ಏಕ ಸದಸ್ಯ ಪೀಠ, ಸರಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಧಾರ್ಮಿಕ ದತ್ತಿ ಇಲಾಖೆಯ ನಿರ್ಧಾರ ತಪ್ಪು ಎಂದು ಮಧ್ಯಂತರ ಆದೇಶ ನೀಡಿದ್ದಾರೆ. ಶ್ರೀಗಳ ಪಾಲ್ಗೊಳ್ಳುವಿಕೆ ವಿಚಾರ ಧಾರ್ಮಿಕ ಪರಿಷತ್ ನಿರ್ಧರಿಸಬೇಕು ಎನ್ನುವ ರಾಮಚಂದ್ರಾಪುರ ಮಠದ ವಕೀಲರ ವಾದವನ್ನು ಪುರಷ್ಕರಿಸಿದ ನ್ಯಾಯಪೀಠ, ಜನ್ಮಾಷ್ಠಮಿಯ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸಬೇಕೋ, ಬೇಡವೋ ಎನ್ನುವುದನ್ನು ಪರಿಷತ್ ನಿರ್ಧರಿಸಲಿ ಎಂದು ಅಭಿಪ್ರಾಯ ಪಟ್ಟಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಇದಕ್ಕೂ ಹಿಂದೆ ಕೊಲ್ಲೂರಿನ ಪ್ರಧಾನ ಅರ್ಚಕರಲ್ಲೊಬ್ಬರಾದ ಶ್ರೀಧರ ಅಡಿಗ ರಜಾಕಾಲದ ಜಿಲ್ಲಾ ನ್ಯಾಯಪೀಠದ ಮೊರೆ ಹೋಗಿದ್ದಾಗನ್ಯಾಯಾಲಯ 2006ರಿಂದೀಚೆ ನಡೆದುಕೊಂಡು ಬಂದಿರುವಂತೆ ರಾಘವೇಶ್ವರ ಶ್ರೀಗಳಿಂದ ಜರುಗುವ ಪೂಜೆ ಹಾಗೂ ಕುಂಭಾಭಿಷೇಕಕ್ಕೆ ಅಡ್ಡಿ ಪಡಿಸಬಾರದು ಎಂದು ಹೇಳಿತ್ತು. ಆದರೆ ಹೈಕೋರ್ಟ್ ವರದಿ ವಿಳಂಬವಾಗಿ ತಲುಪಿದೆ ಎಂಬ ನೆಪವೊಡ್ಡಿ ಜಿಲ್ಲಾಡಳಿತ ಸ್ವಾಮೀಜಿ ಅವರನ್ನು ಪೂಜೆಗೆ ಆಹ್ವಾನಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಭಕ್ತರು ತಮ್ಮ ಅಸಮಾಧಾನ ಹೊರಗೆಡವಿದ್ದಾರೆ.
ದೇವಿಯ ಜನ್ಮಾಷ್ಠಮಿ ಸಂಪನ್ನ:
ಕ್ಷೇತ್ರದಲ್ಲಿ ವಿಶೇಷವಾಗಿ ಶತಚಂಡಿಯಾಗ, ಶತರುದ್ರಾಭಿಶೇಕ ಹಾಗೂ ಉತ್ಸವಗಳು ನಡೆಯಿತು. ಕೇರಳದ ಕಲಾವಿದರಿಂದ ಸಂಗೀತೋತ್ಸವ ನಡೆಯಿತು. ರಾಜ್ಯ-ಹೊರರಾಜ್ಯದಿಂದ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಹರಕೆ, ಪೂಜೆ ಸಲ್ಲಿಸಿ ಜಗನ್ಮಾತೆಯ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡು ವಿಜ್ರಂಭಣೆಯಿಂದ ಉತ್ಸವ ಆಚರಿಸಿದರು.
ದೇವಳದ ಸುತ್ತಿ ಬಿಗಿ ಬಂದೋವಸ್ತ್:
ದೇವಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋವಸ್ತ್ ಏರ್ಪಡಿಸಲಾಗಿತ್ತು. ಭಕ್ತರಲ್ಲಿ ರಾಘವೇಶ್ವರ ಶ್ರೀಗಳು ಆಗಮಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಶ್ರೀಗಳು ಈ ಭಾರಿಯೂ ಬಾರದೇ ನಿರಾಶೆಯನ್ನುಂಟುಮಾಡಿದ್ದಾರೆ. ಶ್ರೀಗಳು ತಾಯಿ ಮೂಕಾಂಬಿಕೆಗೆ ಪೂಜೆ ಮಾಡುವಲ್ಲಿ ಸ್ಥಳೀಯರು ಹಾಗೂ ದೇವಳದವರ ಆಪ್ಷೇಪವಿಲ್ಲ ಆದರೆ ಧಾರ್ಮಿಕ ದತ್ತಿ ಇಲಾಖೆಯ ಏಕಪಕ್ಷೀಯ ನಿಲುವು, ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶ್ರೀಗಳಿಗೆ ಆಹ್ವಾನ ನೀಡದಿರುವುದು ಬೇಸರ ತರಿಸಿದೆ ಎಂದು ಭಕ್ತರು ಹೇಳಿಕೊಂಡಿದ್ದಾರೆ./ಕುಂದಾಪ್ರ ಡಾಟ್ ಕಾಂ ವರದಿ/