Kundapra.com ಕುಂದಾಪ್ರ ಡಾಟ್ ಕಾಂ

ಬ್ರಾಹ್ಮಣರನ್ನು ಹೀಗೆಳೆಯುವವರಿಗೆ ಸಂಘಟನೆ ಮೂಲಕ ಉತ್ತರ: ಮಂಜುನಾಥ ಉಪಾಧ್ಯಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಮಾಜದಲ್ಲಿ ಬ್ರಾಹ್ಮಣರನ್ನು ಹೀಗೆಳೆಯುವವರಿಗೆ ಸಂಘಟನೆ ಮೂಲಕ ಉತ್ತರ ನೀಡಬೇಕಿದ್ದು, ಸಂಘಟನೆ ಸಶಕ್ತವಾಗಿದ್ದರೆ ಮಾತ್ರ ಸಾಧ್ಯ. ಬ್ರಾಹ್ಮಣರು ಜಾಗೃತರಾಗಿ ಸಂಘಟನೆ ಮಹತ್ವ ಅರ್ಥಮಾಡಿಕೊಳ್ಳಬೇಕು ಎಂದು ಉಡುಪಿ ಬ್ರಾಹ್ಮಣ ಪರಿಷತ್ ಉಪಾಧ್ಯಕ್ಷ ಮಂಜುನಾಥ ಉಪಾಧ್ಯಾಯ ಹೇಳಿದ್ದಾರೆ.

ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್, ಮಹಿಳಾ ವೇದಿಕೆ ಮತ್ತು ಕುಂದಾಪುರ ವಲಯ ಆಶ್ರಯದಲ್ಲಿ ಹಂಗಳೂರು ಶ್ರೀ ಅನಂತಪದ್ಮನಾಭ ಸಭಾಂಗಣದಲ್ಲಿ ನಡೆದ ತಾಲೂಕ್ ವಿಪ್ರ ಮಹಿಳಾ ಸಮಾವೇಶ ಸಮಾರೋಪದಲ್ಲಿ ಮಾತನಾಡಿದರು.

ಬ್ರಾಹ್ಮಣತ್ವ ಹಿಂದೂ ಸಂಸ್ಕೃತಿ ಪ್ರತೀಕವಾಗಿದ್ದು, ಬ್ರಾಹ್ಮಣ್ಯ ಅಳಿದರೆ ಹಿಂದೂ ಸಂಸ್ಕೃತಿಯೂ ಅಳಿಯುತ್ತದೆ. ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಕಳ, ಕುಂದಾಪುರ ಮತ್ತು ಉಡುಪಿ ತಾಲೂಕಿನ ಬ್ರಾಹ್ಮಣ ಮಕ್ಕಳ ಸಮಾವೇಶ ನಡೆಸಿ, ಸಾಂಸ್ಕಾರ ಉಳಿಸುವ ಸಂಸ್ಕೃತಿ ಕಲಿಸಲಾಗುತ್ತದೆ. ಹಾಗೆ ಜಿಲ್ಲೆಯಲ್ಲಿ ಮೂರು ತಾಲೂಕ್ ಸೇರಿಸಿಕೊಂಡು ಬ್ರಹತ್ ವಿಪ್ರ ಸಮಾವೇಶ ನಡೆಸಲಾಗುತ್ತದೆ ಎಂದು ಹೇಳಿದರು.

ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಬ್ರಾಹ್ಮಣ ಪರಿಷತ್ ಮಹಿಳಾ ವೇದಿಕೆ ಅಧ್ಯಕ್ಷ ಶೋಭಾ ಉಪಾಧಾ ಯ, ಉಡುಪಿ ಬ್ರಾಹ್ಮಣ ಪರಿಷತ್ ಉಪಾಧ್ಯಕ್ಷ ನಾಗರಾಜ ಉಪಾಧ್ಯಾಯ, ಉಡುಪಿ ಶ್ರೀನಿವಾಸ ಉಪಾಧ್ಯಾಯ, ಜಯಶ್ರೀ ಉಡುಪಿ, ಗೀತಾ ಮಂಜುನಾಥ ಉಪಾಧ್ಯಾಯ, ತಾಲೂಕ್ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಎಂ.ಉಡುಪ. ದುಗಾಂಬಾ ಮೋಟಾರ‍್ಸ್ ಕೃಷ್ಣಾನಂದ ಚಾತ್ರ ಇದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾವನಾ ಐತಾಳ್, ಸಿಇಟಿ ರ‍್ಯಾಂಕ್ ವಿಜೇಯಿತೆ ವಾಸವಿ ಉಡುಪ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ೮೦ ವರ್ಷ ದಾಟಿದ ಹಿರಿಯ ವಿಪ್ರ ಮಹಿಳೆಯರನ್ನು ಗೌರವಿಸಲಾಯಿತು.

ವಾಣಿಶ್ರೀ ಕುಂದಾಪುರ ಪ್ರಾರ್ಥಿಸಿದರು. ಗಾಯತ್ರಿ ನಿರಂಜನ್ ಉಪಾಧ್ಯ ಸ್ವಾಗತಿಸಿದರು. ಭಾರತಿ ಉಪಾಧ್ಯಾಯ ನಿರೂಪಿಸಿದರು. ದ್ರಾವಿಡ ಬ್ರಾಹ್ಮಣ ಪರಿಷತ್ ಮಾಜಿ ಮಹಿಳಾ ಅಧ್ಯಕ್ಷೆ ಶೋಭಾ ಅರಸ್ ಬಹಮಾನ ವಿತರಿಸಿದರು. ಶಾಂತಾ ಗಣೇಶ್ ರಾವ್ ಸನ್ಮಾನಿತರ ಪರಿಚಯ ಮಾಡಿದರು. ಯಕ್ಷಗಾನ ನೃತ್ಯ ರೂಪಕ, ಭರತನಾಟ್ಯ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಹೆಣ್ಣು ಮಕ್ಕಳಿಂದ ನಡೆಯಿತು.

Exit mobile version